13ರಿಂದ ಬಿಜಿಎಸ್‌ ಕಪ್‌ ರಾಜ್ಯ ಮಟ್ಟದ ಕಬಡ್ಡಿ

| Published : May 10 2025, 01:06 AM IST

ಸಾರಾಂಶ

ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಖ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಅರಕಲಗೂಡು ಶಾಸಕ ಎ.ಮಂಜು, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಭೋಜೇಗೌಡ, ಸೂರಜ್ ರೇವಣ್ಣ, ಮಾಜಿ ಶಾಸಕ ಅಪ್ಪಚ್ಚುರಂಜನ್, ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ‘ಬಿಜಿಎಸ್‌ ಕಪ್’ ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಮೇ 13ರಿಂದ ಮೂರು ದಿನ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್ ಕುಶಾಲನಗರ ಆಶ್ರಯದಲ್ಲಿ ಈ ಟೂರ್ನಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯಮಟ್ಟದ ಸೀನಿಯರ್ಸ್ ಚಾಂಪಿಯನ್ ಶಿಪ್ ರಾಜ್ಯಮಟ್ಟದ ಪ್ರೊ ಕಬಡ್ಡಿ ಪಂದ್ಯಾಟವನ್ನು ಮೊದಲ ಬಾರಿಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಖ ಮಠಾಧೀಶ ಶ್ರೀ ಶಂಭುನಾಥ ಸ್ವಾಮೀಜಿ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಅರಕಲಗೂಡು ಶಾಸಕ ಎ.ಮಂಜು, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಭೋಜೇಗೌಡ, ಸೂರಜ್ ರೇವಣ್ಣ, ಮಾಜಿ ಶಾಸಕ ಅಪ್ಪಚ್ಚುರಂಜನ್, ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮೇ 13ರಂದು ಸಂಜೆ 4 ಗಂಟೆಗೆ ಕುಶಾಲನಗರದ ಬೈಚನ ಹಳ್ಳಿಯ ಮಾರಮ್ಮ ದೇವಸ್ಥಾನದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರೆಗೆ ಕಲಾತಂಡಗಳ ಮೂಲಕ ಬೃಹತ್ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಮಠಾಧೀಶರು, ಜಿಲ್ಲೆಯ ಸಮುದಾಯ ಬಾಂಧವರು, ಜನಪ್ರತಿನಿಧಿಗಳು, ರಾಜ್ಯಮಟ್ಟದ ಹಲವು ತಂಡಗಳು ಮತ್ತು ರಾಷ್ಟ್ರೀಯ ಮಟ್ಟದ ಖ್ಯಾತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ಆಹ್ವಾನಿತ ಕಬಡ್ಡಿ ತಂಡಗಳು ಭಾಗವಹಿಸಲಿವೆ. ಪುರುಷರ ವಿಜೇತ ತಂಡಕ್ಕೆ ಒಂದು ಲಕ್ಷ ರು. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಿಗೆ 50,000 ರು. ಮತ್ತು ಆಕರ್ಷಕ ಟ್ರೋಫಿ, ಮೂರನೇ ಮತ್ತು ನಾಲ್ಕನೇ ಬಹುಮಾನವಾಗಿ 25000 ರು. ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.ಇದೇ ಸಂದರ್ಭ ಕುಶಾಲನಗರ ತಾಲೂಕು ಒಕ್ಕಲಿಗ ಯುವ ವೇದಿಕೆ ಉದ್ಘಾಟನೆಗೊಳ್ಳಲಿದೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ ಹೇರೂರು, ಅವಿನಾಶ್, ಜೈ ರಾಜ್, ಸುನಿಲ್ ಕುಮಾರಪ್ಪ, ಕಿರಣ್ ಹನುಮರಾಜ್ ಇದ್ದರು.