ಸಾರಾಂಶ
ಭೈರವೈಕ್ಯ ಶ್ರೀಗಳ ಹೆಸರಿನಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಬಂದಿರುವುದು ನನ್ನ ಪುಣ್ಯ. ನನ್ನ ಹುಟ್ಟೂರು ಮಲೆನಾಡಾಗಿದ್ದರೂ ಸಹ ಮದ್ದೂರಿನಲ್ಲಿ 35 ವರ್ಷಗಳ ಕಾಲ ಕಿಂಚಿತ್ತು ಲೋಪವಾಗದಂತೆ ಆಧ್ಯಾಪಕ ವೃತ್ತಿಜೀವನ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಯುವ ಪೀಳಿಗೆಯನ್ನು ನೀಡಲು ಮದ್ದೂರು ನೆಲ ಅವಕಾಶ ಮಾಡಿಕೊಟ್ಟಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಚುಂಚಶ್ರೀ ಗೆಳೆಯರ ಬಳಗ ಮತ್ತು ಶ್ರೀನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಭಾನುವಾರ ನಡೆದ ಸಮಾರಂಭದಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಬಿ.ಟಿ.ಚಂದ್ರಪ್ಪಗೌಡರಿಗೆ ಬಿಜಿಎಸ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪಟ್ಟಣದ ಟೌನ್ ಕ್ಲಬ್ ನ ಶ್ರೀಉಗ್ರನರಸಿಂಹ ಸ್ವಾಮಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ.ಬಿ.ಟಿ.ಚಂದ್ರಪ್ಪಗೌಡರಿಗೆ ಬಿಜಿಎಸ್ ಸೇವಾ ರತ್ನ ಪ್ರಶಸ್ತಿಯೊಂದಿಗೆ ನೆನಪಿನ ಕಾಣಿಕೆ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಚಂದ್ರಪ್ಪಗೌಡರು ಭೈರವೈಕ್ಯ ಶ್ರೀಗಳ ಹೆಸರಿನಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಬಂದಿರುವುದು ನನ್ನ ಪುಣ್ಯ. ನನ್ನ ಹುಟ್ಟೂರು ಮಲೆನಾಡಾಗಿದ್ದರೂ ಸಹ ಮದ್ದೂರಿನಲ್ಲಿ 35 ವರ್ಷಗಳ ಕಾಲ ಕಿಂಚಿತ್ತು ಲೋಪವಾಗದಂತೆ ಆಧ್ಯಾಪಕ ವೃತ್ತಿಜೀವನ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಯುವ ಪೀಳಿಗೆಯನ್ನು ನೀಡಲು ಮದ್ದೂರು ನೆಲ ಅವಕಾಶ ಮಾಡಿಕೊಟ್ಟಿದೆ ಎಂದು ಸ್ಮರಿಸಿದರು.ಕಾರ್ಯಕ್ರಮಕ್ಕೆ ಇತಿಹಾಸ ಸಂಶೋಧಕ ತೈಲೂರು ವೆಂಕಟ ಕೃಷ್ಣ ಅವರು, ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಭೈರವೈಕ್ಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ ಅಭಿನಂದಿತರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಸಿದ್ದರಾಮಯ್ಯ, ಶಿವನಂಜಯ್ಯ, ಚುಂಚಶ್ರೀ ಗೆಳೆಯರ ಬಳಗದ ಪದಾಧಿಕಾರಿಗಳಾದ ವಿ.ಟಿ.ರವಿಕುಮಾರ್, ಚೆನ್ನಯ್ಯ, ದೊರೆಸ್ವಾಮಿ, ಎಂ.ಎ.ಕೃಷ್ಣ, ಕೆ.ಶಿವಕುಮಾರ್, ಎಸ್.ಚಂದ್ರು, ಕೆ.ನಾರಾಯಣ್ ಎಸ್.ಕೆ.ಆನಂದ ಭಾಗವಹಿಸಿದ್ದರು.