ಸೆಪ್ಟೆಂಬರ್‌ ಒಂಬತ್ತಂದು ಕುಂದೂರಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆ

| Published : Sep 05 2025, 01:00 AM IST

ಸಾರಾಂಶ

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಅವೈಜ್ಞಾನಿಕ ಪೈಪ್ ಲೈನ್ ಅಳವಡಿಸಿರುವುದು ದಾವಣಗೆರೆ ಜಿಲ್ಲೆ ಅಚ್ಚುಕಟ್ಟು ರೈತರಿಗೆ ಮರ್ಮಾಘಾತವಾಗಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ರೈತರ ಒಕ್ಕೂಟದಿಂದ ಹೊನ್ನಾಳಿ ತಾ. ಕುಂದೂರು ಗ್ರಾಮದಲ್ಲಿ ಸೆ.9ರಂದು ಅಚ್ಚುಕಟ್ಟು ರೈತರ ಸಭೆ ಕರೆಯಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಅವೈಜ್ಞಾನಿಕ ಪೈಪ್ ಲೈನ್ ಅಳವಡಿಸಿರುವುದು ದಾವಣಗೆರೆ ಜಿಲ್ಲೆ ಅಚ್ಚುಕಟ್ಟು ರೈತರಿಗೆ ಮರ್ಮಾಘಾತವಾಗಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ರೈತರ ಒಕ್ಕೂಟದಿಂದ ಹೊನ್ನಾಳಿ ತಾ. ಕುಂದೂರು ಗ್ರಾಮದಲ್ಲಿ ಸೆ.9ರಂದು ಅಚ್ಚುಕಟ್ಟು ರೈತರ ಸಭೆ ಕರೆಯಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ಕ್ಕೆ ಭಾರತೀಯ ರೈತ ಒಕ್ಕೂಟದ ಹಿರಿಯ ದುರೀಣ, ಮಾಜಿ ಸಚಿವ ಎಸ್.ಎಂ.ರವೀಂದ್ರನಾಥ್‌ರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅಚ್ಚುಕಚ್ಚು ರೈತರು, ರೈತ ಮುಖಂಡರು, ಹಾಲಿ-ಮಾಜಿ ಜನ ಪ್ರತಿನಿಧಿಗಳು, ರೈತ ಒಕ್ಕೂಟದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಬಲದಂಡೆ ನಾಲೆ ಸೀಳಿ ಪೈಪ್ ಲೈನ್ ಅಳವಡಿಸಿದ್ದು ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಮರ್ಮಾಘಾತವಾಗಿದೆ. ಚಿತ್ರದುರ್ಗ-ಚಿಕ್ಕಮಗಳೂರಿನ 2-3 ಜಿಲ್ಲೆಗೆ ನೀರು ಕೊಡುವ ನೆಪದಲ್ಲಿ ಭದ್ರಾ ಬಲದಂಡೆ ನಾಲೆ ಸೀಳಿ ಕಾಂಗ್ರೆಸ್ ಸರ್ಕಾರ ಕಾಮಗಾರಿ ಕೈಗೊಂಡಿದ್ದು ಸತ್ಯ. ನೆರೆ ಜಿಲ್ಲೆಗಳಿಗೆ ನೀರು ನೀಡಲು ನಮ್ಮ ವಿರೋಧವಿಲ್ಲ. ತುಂಗಾ ಡ್ಯಾಂನಿಂದ 7 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ತಂದು, ಭದ್ರಾ ಮೇಲ್ದಂಡೆಗೆ ಹರಿಸಲು ನಮ್ಮ ವಿರೋಧವಿಲ್ಲ. ಆದರೆ, ಅವೈಜ್ಞಾನಿಕ, ಅಪಾಯಕಾರಿ ಕಾಮಗಾರಿ ಕೈಗೊಂಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಪುನರುಚ್ಛರಿಸಿದರು.

ಭ‍ವಿಷ್ಯದಲ್ಲಿ ಅಚ್ಚುಕಟ್ಟು ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಹಿರಿಯೂರು ಕೆರೆ ತುಂಬಿಸಲು 1200 ಕೋಟಿ ಕೋಟಿ ಸರ್ಕಾರ ನೀಡಿದೆ. ತುಂಗಾದಿಂದ 17.5 ಟಿಎಂಸಿ ನೀರನ್ನು ಭದ್ರಾಗೆ ಹರಿಸಲಿ. ಕಾಮಗಾರಿ ವಿರೋಧಿಸಿದ್ದಕ್ಕೆ ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಕಾಂಗ್ರೆಸ್ ಶಾಸಕರು ನಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದರು.

ಕುಂದೂರು ಸಭೆ ಹಿನ್ನೆಲೆಯಲ್ಲಿ ಬಸವಾಪಟ್ಟಣದಲ್ಲಿ ಸಭೆ ಮಾಡಿದ್ದೇವೆ. ಕೊಂಡಜ್ಜಿ, ಕಕ್ಕರಗೊಳ್ಳ, ಕಾಡಜ್ಜಿ ಹೀಗೆ ಮೂರೂ ತಾಲೂಕಿನಲ್ಲೂ ರೈತರ ಸಭೆ ಮಾಡಿ, ಆಹ್ವಾನಿಸುತ್ತಿದ್ದೇವೆ. ಕುಂದೂರು ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸುತ್ತೇವೆ. ದಾವಣಗೆರೆ ಜಿಲ್ಲೆಯ ಮತದಾರರ ಮತ ಪಡೆದು ಗೆದ್ದ ಕಾಂಗ್ರೆಸ್ಸಿನ ಶಾಸಕರು ನೆರೆ ಜಿಲ್ಲೆಗಳ ಪರ ವಕಾಲತ್ತು ವಹಿಸಿ, ಅಚ್ಚುಕಟ್ಟು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ನೀರು, ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ನಮ್ಮ ಹೋರಾಟ ನಡೆಯುತ್ತದೆ. ಕಾಂಗ್ರೆಸ್ಸಿಗರು ಇನ್ನಾದರೂ ಅಮಾಯಕ ಅಚ್ಚುಕಟ್ಟು ರೈತರಿಗೆ ಮಕ್ಮಲ್‌ ಟೋಪಿ ಹಾಕುವುದನ್ನು ಕೈಬಿಡಲಿ ಎಂದರು.

ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ರೈತ ಮುಖಂಡರಾದ ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೇಬಾಳು, ತಾರೇಶ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ಡಿ.ವಿ.ಜಯರುದ್ರಪ್ಪ, ಅಜಯಕುಮಾರ, ರವಿಗೌಡ್ರು, ಚೇತನ್ ಕಾಳೆ ಇತರರು ಇದ್ದರು.