ವಿಜಯನಗರ ಜಿಲ್ಲೆ ಕುಡಿಯುವ ನೀರಿನ ಬವಣೆಗೆ ಭದ್ರೆ ಆಸರೆ!

| Published : Apr 03 2024, 01:40 AM IST / Updated: Apr 03 2024, 08:25 AM IST

ಸಾರಾಂಶ

ಈಗ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಇನ್ನೂ ಗದಗ, ಕೊಪ್ಪಳ ಜಿಲ್ಲಾಧಿಕಾರಿಗಳು ಕೂಡ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದರು. ಈಗ ಜಲಾಶಯದಿಂದ ನದಿಗೆ ಏಪ್ರಿಲ್‌ 6ರ ವರೆಗೆ 2 ಟಿಎಂಸಿಯಷ್ಟು ನೀರು ಹರಿದು ಬರಲಿದೆ.

ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ : ಈ ಭಾಗದ ಜನರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ನೀರು ಪಾತಾಳಕ್ಕೆ ಇಳಿದಿರುವುದರಿಂದ ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈಗ ವಿಜಯನಗರ ಜಿಲ್ಲಾಧಿಕಾರಿ ಸರ್ಕಾರಕ್ಕೆ ಬರೆದ ಪತ್ರಕ್ಕೆ ಸ್ಪಂದಿಸಿ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಈ ನೀರು ಸಿಂಗಟಾಲೂರು ಬ್ಯಾರೇಜ್‌ ತಲುಪಿದರೆ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕಳೆದ ವರ್ಷ ಮುಂಗಾರು, ಹಿಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ವಿಜಯನಗರ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಇನ್ನೂ ಗದಗ, ಕೊಪ್ಪಳ ಜಿಲ್ಲಾಧಿಕಾರಿಗಳು ಕೂಡ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದರು. ಈಗ ಜಲಾಶಯದಿಂದ ನದಿಗೆ ಏಪ್ರಿಲ್‌ 6ರ ವರೆಗೆ 2 ಟಿಎಂಸಿಯಷ್ಟು ನೀರು ಹರಿದು ಬರಲಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರ

ಭದ್ರಾದಿಂದ ಬಿಟ್ಟಿರುವ ನೀರು ಹರಿಹರದ ರಾಜನಹಳ್ಳಿ ಬ್ಯಾರೇಜ್ ತಲುಪಿದ್ದು ಇನ್ನು ಎರಡು ದಿನಗಳಲ್ಲಿ ಹರಪನಹಳ್ಳಿ ದಾಟಿ ಸಿಂಗಟಾಲೂರು ಬ್ಯಾರೇಜ್ ತಲುಪಲಿದೆ. ಜಿಲ್ಲೆಯ ಹರಪನಹಳ್ಳಿ ಮತ್ತು ಹಡಗಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಮಾರು 45 ದಿನಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಬಹುದು. ಅಲ್ಲಿಂದ 45 ಕಿಮೀ ದೂರದ ಬನ್ನಿಗೋಳ ಜಾಕ್ ವೆಲ್ ತಲುಪಿದರೆ ವಿಜಯನಗರ ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ನಗರ ಪ್ರದೇಶಗಳು ಮತ್ತು 120ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳ ವರೆಗೆ ನೀರನ್ನು ಸರಬರಾಜು ಮಾಡಬಹುದಾಗಿದೆ. ಉಳಿದಂತೆ ಹೊಸಪೇಟೆ ನಗರಕ್ಕೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳು ವಿಜಯನಗರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ಪಾತಾಳಕ್ಕೆ ನೀರು

ತುಂಗಭದ್ರಾ ಜಲಾಶಯದಲ್ಲಿ ಈಗ ಬರೀ 4.632 ಟಿಎಂಸಿಯಷ್ಟು ನೀರು ಇದೆ. ಈ ಪೈಕಿ 2 ಟಿಎಂಸಿಯಷ್ಟು ನೀರು ಡೆಡ್‌ ಸ್ಟೋರೇಜ್‌ ಆಗಿದೆ. ತುಂಗಭದ್ರಾ ಜಲಾಶಯದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಕಡಿಮೆ ಇರುವುದರಿಂದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಜಿಲ್ಲಾಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ. ಈಗ ಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಬಿಡಲಾಗಿದೆ. ಇದರಲ್ಲಿ ಹಾವೇರಿ, ಗದಗ ಜಿಲ್ಲೆಗೂ ನೀರು ಹೋಗಲಿದೆ. ಇನ್ನು ದಾವಣಗೆರೆಯ ಹರಿಹರ ಭಾಗದಲ್ಲೂ ನೀರು ನಿಲ್ಲಿಸಿದರೆ, ವಿಜಯನಗರ ಜಿಲ್ಲೆಗೆ 3500 ಕ್ಯುಸೆಕ್‌ನಷ್ಟು ನೀರು ಸಿಗಬಹುದು ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

ವಿಜಯನಗರ ಜಿಲ್ಲೆಯ ಸಿಂಗಟಾಲೂರು ಬ್ಯಾರೇಜ್‌ಗೆ ಒಂದು ಟಿಎಂಸಿಯಷ್ಟು ನೀರು ಬಂದು ಸೇರಿದರೆ ಸಮಸ್ಯೆ ಪರಿಹಾರವಾಗಲಿದೆ. ಆದರೆ, ನೀರು ಬಿಟ್ಟ ತಕ್ಷಣವೇ ಅಲ್ಲಲ್ಲಿ ನಿಲ್ಲಿಸುವುದು, ಜೊತೆಗೆ ರೈತರು ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಇಟ್ಟು ಹೊಡೆದು ಕೊಳ್ಳುತ್ತಾರೆ. ಮೈಲಾರ ಜಾತ್ರೆಗೆ ನೀರು ಬಿಟ್ಟಾಗಲೂ ಇದೇ ಸಮಸ್ಯೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ನೀರಾವರಿ ಇಲಾಖೆಯ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.

ಆದರೆ, ವಿಜಯನಗರ ಜಿಲ್ಲಾಡಳಿತ ಹಾಗೂ ನೀರಾವರಿ ನಿಗಮ ಕೂಡ ಈ ನೀರು ಕುಡಿಯುವ ನೀರಿಗೆ ಬಳಕೆ ಆಗಬೇಕು ಎಂದು ಮುಂಜಾಗ್ರತಾ ಕ್ರಮವಹಿಸಿದೆ. ಒಂದು ಟಿಎಂಸಿಯಷ್ಟು ನೀರು ನದಿಯಿಂದ ಸಿಂಗಟಾಲೂರು ಬ್ಯಾರೇಜ್‌ವರೆಗೆ ತಲುಪಿಸಲು ಎಲ್ಲಾ ಮುಂಜಾಗ್ರತೆ ವಹಿಸಲಾಗಿದೆ. ನದಿ ದಂಡೆಯಲ್ಲಿ ಅಳವಡಿಸಿರುವ ಅನಧಿಕೃತ ಪಂಪ್‌ಸೆಟ್‌ಗಳ ಮೇಲೆ ನಿಗಾವಹಿಸಲಾಗಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ಜನರು ಮತ್ತು ದನಕರುಗಳನ್ನು ನದಿಗೆ ಇಳಿಸಬಾರದು ಎಂದೂ ಸೂಚಿಸಲಾಗಿದೆ.

ಜಿಂದಾಲ್‌ಗೆ ನೀರು ಸರಬರಾಜು ಸ್ಥಗಿತ!

ತುಂಗಭದ್ರಾ ಜಲಾಶಯದಲ್ಲೂ ನೀರು ಕಡಿಮೆ ಇದ್ದರೂ ಜಿಂದಾಲ್‌ ಕಾರ್ಖಾನೆಗೆ ಕಳೆದ ಒಂದು ವಾರದಿಂದ ದಿನಕ್ಕೆ 10 ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿತ್ತು. ಇದರ ಬಗ್ಗೆ ಜಿಲ್ಲೆಯ ರೈತರು ಹಾಗೂ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಈ ಹೋರಾಟಕ್ಕೆ ಮಣಿದು ಈಗ ತುಂಗಭದ್ರಾ ಮಂಡಳಿ ಜಿಂದಾಲ್‌ ಕಾರ್ಖಾನೆಗೆ ಸರಬರಾಜು ಮಾಡುತ್ತಿದ್ದ ನೀರನ್ನು ನಿಲ್ಲಿಸಿದೆ.

45 ದಿನ ನೀರು

ಭದ್ರಾ ಜಲಾಶಯದಿಂದ ಬಿಟ್ಟಿರುವ ನೀರು ಹರಿಹರದ ರಾಜನಹಳ್ಳಿ ಬ್ಯಾರೇಜ್ ತಲುಪಿದೆ. ಇನ್ನು ಎರಡು ದಿನಗಳಲ್ಲಿ ಹರಪನಹಳ್ಳಿ ದಾಟಿ ಸಿಂಗಟಾಲೂರು ಬ್ಯಾರೇಜ್ ತಲುಪಲಿದೆ. ಜಿಲ್ಲೆಯ ಹರಪನಹಳ್ಳಿ ಮತ್ತು ಹಡಗಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಮಾರು 45 ದಿನಗಳ ಕುಡಿಯುವ ನೀರಿನ ಬವಣೆಯನ್ನು ನೀಗಿಸಬಹುದು. ಅಲ್ಲಿಂದ 45 ಕಿಮೀ ದೂರದ ಬನ್ನಿಗೋಳ ಜಾಕ್ ವೆಲ್ ತಲುಪಿದರೆ ವಿಜಯನಗರ ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ನಗರ ಪ್ರದೇಶಗಳು ಮತ್ತು 120ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳವರೆಗೆ ನೀರನ್ನು ಸರಬರಾಜು ಮಾಡಬಹುದಾಗಿದೆ.

- ಎಂ.ಎಸ್‌. ದಿವಾಕರ್‌, ವಿಜಯನಗರ ಜಿಲ್ಲಾಧಿಕಾರಿ.