ಭಾರೀ ಮಳೆಗೆ ಬಳಲಿದ ಭದ್ರಾವತಿ

| Published : Oct 21 2024, 12:37 AM IST

ಸಾರಾಂಶ

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಿರುವ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ನಗರದ ಹಳೇ ಸೇತುವೆ ಸಮೀಪದ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ಮುಳುಗಡೆಗೊಂಡಿರುವುದು.

ಕನ್ನಡಪ್ರಭ ವಾರ್ತೆ ಭದ್ರಾವತಿ:

ಕಳೆದ ಕೆಲವು ದಿನಗಳಿಂದ ಕ್ಷೇತ್ರದಾದ್ಯಂತ ಪುನಃ ಮಳೆಯಾಗುತ್ತಿದ್ದು, ಇದರಿಂದ ಕೊಯ್ಲು ಹಂತಕ್ಕೆ ಬಂದಿರುವ ಭತ್ತದ ಬೆಳೆಗೆ ಒಂದೆಡೆ ಹಾನಿಯಾಗುವ ಭೀತಿ, ಮತ್ತೊಂದೆಡೆ ಅಡಕೆ ಒಣಗಿಸಲು ಬಿಸಿಲಿನ ಕೊರತೆ ಎದುರಾಗಿದೆ.

ಕ್ಷೇತ್ರದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದ್ದು, ಈಗಾಗಲೇ ಭತ್ತದ ಬೆಳೆ ಕಾಳು ಕಟ್ಟಿ ಕಟಾವು ಹಂತ ತಲುಪಿದೆ. ಈ ಹಂತದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದಾಗಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ನಾಶವಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಮಳೆ ಇದೆ ರೀತಿ ಮುಂದುವರೆದಲ್ಲಿ ರೈತರಿಗೆ ಕೈಗೆ ಬಂದದ್ದು, ಬಾಯಿಗೆ ಸಿಗಲಿಲ್ಲ ಎಂಬಂತಾಗಲಿದೆ.

ಮತ್ತೊಂದೆಡೆ ಅಡಕೆ ತೋಟಗಳಲ್ಲಿ ಕಾಯಿ ಬಲಿತು ಕೊಯ್ಲು ನಡೆಯುತ್ತಿದ್ದು, ರೈತರಿಗೆ ಅಡಕೆ ಸುಲಿದು ಒಣಗಿಸಲು ಬಿಸಿಲಿನ ಕೊರತೆ ಎದುರಾಗಿದೆ. ಸದಾ ಮೋಡಕವಿದ ವಾತಾವರಣವಿದ್ದು, ಅಡಕೆ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಅಲ್ಲದೆ ಮಳೆ ಇದೆ ರೀತಿ ಮುಂದುವರೆದಲ್ಲಿ ಬೆಳವಣಿಗೆ ಹಂತದಲ್ಲಿರುವ ಅಡಕೆ ದಪ್ಪವಾಗದೆ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ.

*ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ:

ನಗರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ದಿನದಗೂಲಿ ನಂಬಿ ಬದುಕುತ್ತಿರುವ ಹಾಗೂ ಬೀದಿಬದಿ ವ್ಯಾಪಾರಿಗಳು ಕೆಲವು ದಿನಗಳಿಂದ ವ್ಯಾಪಾರ ವಹಿವಾಟು ಇಲ್ಲದೆ ತೊಂದರೆ ಎದುರಿಸುತ್ತಿದ್ದಾರೆ. ಹೂ-ಹಣ್ಣು, ತರಕಾರಿ ಮಾರಾಟ ಮಾಡುವ ಹಾಗೂ ರಸ್ತೆ ಬದಿ ತಿಂಡಿ ತಿನುಸುಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ವಹಿವಾಟುವಿಲ್ಲದೆ ದಿನ ಕಳೆಯುವಂತಾಗಿದ್ದು, ಮಳೆ ಇಳಿಮುಖವಾಗುವುದನ್ನು ಎದುರು ನೋಡುತ್ತಿದ್ದಾರೆ.

*ಹಾಳಾದ ರಸ್ತೆಗಳು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಅದರಲ್ಲೂ ಡಾಂಬರ್ ರಸ್ತೆಗಳು ಹಾಳಾಗಿರುವುದು ಪಾದಚಾರಿಗಳು ಹಾಗು ವಾಹನ ಸವಾರರಿಗೆ ತೊಂದರೆಯಾಗಿದೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದ್ದು, ವಾಹನಗಳು ಅಪಘಾತಗಳುಗೊಳ್ಳುವ ಸಾಧ್ಯತೆ ಹೆಚ್ಚಾಗಿವೆ. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.

* ರಸ್ತೆ, ಚರಂಡಿಗಳಲ್ಲಿ ನಿಂತ ನೀರು: ನಗರಸಭೆ ವ್ಯಾಪ್ತಿಯ ಬಹುತೇಕ ಕಡೆ ರಸ್ತೆ ಹಾಗೂ ಚರಂಡಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಹಾಗೂ ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ನಿಂತುಕೊಳ್ಳುತ್ತಿದ್ದು, ಇದರಿಂದಾಗಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ನಿವಾಸಿಗಳು ಅಗತ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ವಾರ್ಡ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭದ್ರಾ ನದಿಯಲ್ಲಿ ಮುಳುಗಿದ ಸಂಗಮೇಶ್ವರ:

ಭದ್ರಾ ಜಲಾಶಯದ ಸುತ್ತಮುತ್ತ ವ್ಯಾಪಕವಾಗಿ ಮಳೆಯಾಗುತ್ತಿರುವ ಈ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗಿದ್ದು, ಇದರಿಂದಾಗಿ ಹಳೇ ಸೇತುವೆ ಸಮೀಪ ಭದ್ರಾ ನದಿಯಲ್ಲಿರುವ ಸಂಗಮೇಶ್ವರ ದೇವಸ್ಥಾನ ನೀರಿನ ಪ್ರಮಾಣ ಹೆಚ್ಚಾದ ಕಾರಣ ಮುಳುಗಡೆಗೊಂಡಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದ್ದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ನಿರ್ಮಾಣವಾಗಿದೆ.