ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರಸಭೆ ಉಪಾಧ್ಯಕ್ಷರಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ೧೧ನೇ ವಾರ್ಡ್ ಸದಸ್ಯ ಮಣಿ ಎಎನ್‌ಎಸ್ ಆಯ್ಕೆಯಾಗಿದ್ದಾರೆ.ನಗರಸಭೆ ೨ನೇ ೩೦ ತಿಂಗಳ ಅವಧಿಗೆ ಸಾಮಾನ್ಯ ಮೀಸಲಾತಿ ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮಣಿ ಮತ್ತು ಜೆಡಿಎಸ್ ಪಕ್ಷದಿಂದ ೩೨ನೇ ವಾರ್ಡ್ ಸದಸ್ಯೆ ಸವಿತಾ ಉಮೇಶ್ ಸ್ಪರ್ಧಿಸಿದ್ದರು. ಮಣಿ ೧೯ ಮತ ಹಾಗೂ ಸವಿತಾ ಉಮೇಶ್ ೧೪ ಮತ ಪಡೆದುಕೊಂಡಿದ್ದು, ೫ ಮತಗಳ ಅಂತರದಿಂದ ಮಣಿ ಗೆಲುವು ಸಾಧಿಸಿದ್ದಾರೆ.
ಉಪವಿಭಾಗಾಧಿಕಾರಿ ಸತ್ಯನಾರಾಯಣ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಉಪಸ್ಥಿತರಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಸೇರಿದಂತೆ ಕಾಂಗ್ರೆಸ್ ಪಕ್ಷದ ೧೮ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು.ಉದ್ಯಮಿ ಬಿ.ಕೆ ಶಿವಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕಾಂಗ್ರೆಸ್ ಮುಖಂಡರಾದ ಸೂಡಾ ಸದಸ್ಯ ಎಚ್. ರವಿಕುಮಾರ್, ವೈ. ನಟರಾಜ್, ಮೋಹನ್ ಪಳನಿ, ಶ್ರೀನಿವಾಸ್, ಕೆ.ಜಿ ರಾಜ್‌ಕುಮಾರ್, ವಿಜಯಲಕ್ಷ್ಮೀ, ಅನಸೂಯ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ, ತಮಿಳು ಗೌಂಡರ್ ಸಮಾಜ, ತಮಿಳು ಸಮಾಜ, ತರೀಕೆರೆ ರಸ್ತೆ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸೇವಾ ಸಮಿತಿ, ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ನೂತನ ಉಪಾಧ್ಯಕ್ಷ ಮಣಿಯವರನ್ನು ಸನ್ಮಾನಿಸಿ ಅಭಿನಂದಿಸಿದರು.
ಮಣಿ ಎಎನ್‌ಎಸ್:ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಖಜಾಂಚಿ, ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಹಾಗೂ ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಮಾಜ ಸೇವಕರಾದ ಮಣಿ ಎಎನ್‌ಎಸ್ ವಾರ್ಡ್ ನಂ.೧೧ರಿಂದ ೨ ಬಾರಿ ನಗರಸಭಾ ಸದಸ್ಯರಾಗಿದ್ದು, ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಮೊದಲ ಬಾರಿಗೆ ನಗರಸಭೆ ಉಪಾಧ್ಯಕ್ಷರಾಗಿದ್ದಾರೆ.
ಕೈಕೊಟ್ಟ ಮೈತ್ರಿ:ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಾದರೂ ಸ್ಥಳೀಯ ಸಂಸ್ಥೆ ನಗರಸಭೆ ಚುನಾವಣೆಯಲ್ಲಿ ಇಲ್ಲವಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಸವಿತಾ ಉಮೇಶ್‌ಗೆ ೧೪ ಮತಗಳು ಮಾತ್ರ ಲಭಿಸಿವೆ. ನಗರಸಭೆಯಲ್ಲಿ ಜೆಡಿಎಸ್ ೧೨, ಬಿಜೆಪಿ ೪ ಹಾಗು ೧ ಪಕ್ಷೇತರ ಸೇರಿದಂತೆ ೧೭ ಸದಸ್ಯರು ನಗರಸಭೆ ಪ್ರತಿ ಪಕ್ಷದ ಸ್ಥಾನದಲ್ಲಿದ್ದಾರೆ. ಚುನಾವಣೆಯಲ್ಲಿ ೩ ಬಿಜೆಪಿ ಸದಸ್ಯರು ಪಾಲ್ಗೊಳ್ಳದಿರುವುದು ಮೈತ್ರಿ ಅಭ್ಯರ್ಥಿ ೫ ಮತಗಳ ಅಂತರದಿಂದ ಸೋಲು ಅನುಭವಿಸುವಂತಾಗಿದೆ.
ಅಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲ:ನಗರಸಭೆ ಅಧ್ಯಕ್ಷ ಸ್ಥಾನ ೨ನೇ ಅವಧಿಯಲ್ಲೂ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಹಿನ್ನೆಲೆ ಈ ಸಂಬಂಧ ಗೊಂದಲ ನಿರ್ಮಾಣವಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸುವಂತೆ ಪೌರಾಡಳಿತ ಇಲಾಖೆ ನಿರ್ದೇಶನ ನೀಡಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಆದೇಶಿಸಿದ್ದರು. ಅದರಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕದಂದೇ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಚುನಾವಣೆ ನಡೆಯಿತು.