ರಾಜಿ ರಹಿತ ಕ್ರಾಂತಿಕಾರಿ ವಿಚಾರಧಾರೆ ಹೊಂದಿದ್ದ ಭಗತ್ ಸಿಂಗ್: ರಾಮಾಂಜನಪ್ಪ ಆಲ್ದಳ್ಳಿ

| Published : Mar 29 2024, 12:52 AM IST

ರಾಜಿ ರಹಿತ ಕ್ರಾಂತಿಕಾರಿ ವಿಚಾರಧಾರೆ ಹೊಂದಿದ್ದ ಭಗತ್ ಸಿಂಗ್: ರಾಮಾಂಜನಪ್ಪ ಆಲ್ದಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿಗೂ ದೇಶದ ಬಹುದೊಡ್ಡ ಸಂಖ್ಯೆಯ ಜನರ ಮೇಲೆ ಗಾಢವಾದಂತ ಪ್ರಭಾವ ಬೀರಿದವರು ಭಗತ್ ಸಿಂಗ್.

94ನೇ ಹುತಾತ್ಮ ದಿನದ ಅಂಗವಾಗಿ ಸಾರ್ವಜನಿಕ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ನೌಕರರ ಭವನದಲ್ಲಿ ಭಗತ್ ಸಿಂಗ್ ರ 94ನೇ ಹುತಾತ್ಮ ದಿನದ ಅಂಗವಾಗಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್ಎಸ್ ಸಂಘಟನೆಗಳಿಂದ ಸಾರ್ವಜನಿಕ ಸಭೆ ಜರುಗಿತು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಇಂದಿಗೂ ದೇಶದ ಬಹುದೊಡ್ಡ ಸಂಖ್ಯೆಯ ಜನರ ಮೇಲೆ ಗಾಢವಾದಂತ ಪ್ರಭಾವ ಬೀರಿದವರು ಭಗತ್ ಸಿಂಗ್. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವಾರು ವಿಚಾರಧಾರೆಗಳಿದ್ದರೂ ಭಗತ್ ಸಿಂಗ್ ಪ್ರತಿನಿಧಿಸಿದ್ದು ರಾಜಿ ರಹಿತವಾದಂತಹ ಕ್ರಾಂತಿಕಾರಿ ವಿಚಾರಧಾರೆ. ಕ್ರಾಂತಿ ಎಂದರೆ ಕೇವಲ ಬ್ರಿಟಿಷರನ್ನು ದೇಶ ಬಿಟ್ಟು ಓಡಿಸುವುದು ಹಾಗೂ ಕೆಲವು ಸುಧಾರಣೆಗಳನ್ನು ಮಾಡುವುದಷ್ಟೇ ಅಲ್ಲ, ಎಲ್ಲಾ ರೀತಿಯ ಶೋಷಣೆಗಳಿಂದ ಸಮಾಜವನ್ನು, ದೇಶವನ್ನು ಮುಕ್ತಗೊಳಿಸುವುದಾಗಿದೆ ಎಂದು ಭಗತ್ ಸಿಂಗ್ ನಂಬಿದ್ದರು. ಈ ಆದರ್ಶಕೋಸ್ಕರ ಅವರು ಸಿದ್ಧತೆ ನಡೆಸಿ, ಸಂಘಟನೆ ಕಟ್ಟಿ ತಮ್ಮ ಜೀವತ್ಯಾಗ ಮಾಡಿದರು ಎಂದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಗಾಂಧೀಜಿಯವರ ರಾಜಿ ಪಂಥಕ್ಕಿಂತ ಕ್ರಾಂತಿಕಾರಿಗಳ ರಾಜಿರಹಿತ ಹೋರಾಟ ದೇಶದ ಉದ್ದಗಲಕ್ಕೂ ಹರಡಿತ್ತು. ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದು, ಅಹಿಂಸೆಯ ಹೋರಾಟದಲ್ಲಿ ನಂಬಿಕೆ ಇಡಲಿಲ್ಲ. ನೀವು ರಕ್ತ ಕೊಡಿ ನಾನು ಸ್ವಾತಂತ್ರ್ಯ ಕೊಡುತ್ತೇನೆಂದು ದೇಶದ ಜನತೆಗೆ ಕರೆ ನೀಡಿದ್ದರು. ಭಗತ್ ಸಿಂಗ್ ರನ್ನು ನಿಗದಿಪಡಿಸಿದ ಒಂದು ದಿನ ಮುಂಚೆಯೇ ಗಲ್ಲು ಗಂಬಕ್ಕೇರಿಸಲಾಯಿತು. ಸಾವಿನ ದವಡೆಯಲ್ಲಿದ್ದರೂ ಭಗತ್ ಸಿಂಗ್ ಕ್ರಾಂತಿಕಾರಿ ಲೆನಿನ್ ಪುಸ್ತಕ ಓದುತ್ತಿದ್ದರು. ಜಗತ್ತಿನ ಹಲವಾರು ಕ್ರಾಂತಿಕಾರಿ ಹೋರಾಟಗಳ ವಿಚಾರಗಳನ್ನು ಭಗತ್ ಸಿಂಗ್ ಅಧ್ಯಯನ ಮಾಡಿದ್ದರು. ನಮ್ಮ ದೇಶದಲ್ಲಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಇಂತಹ ಕ್ರಾಂತಿಕಾರಿ ವಿಚಾರಗಳನ್ನು ದೇಶದ ಉದ್ದಗಲಕ್ಕೂ ವಿದ್ಯಾರ್ಥಿ ಯುವಜನ ಮೂಲೆ ಮೂಲೆಗೆ ಕೊಂಡೊಯ್ಯುವ ಅವಶ್ಯಕತೆ ಇದೆ ಎಂದರು.

ಈ ವ್ಯವಸ್ಥೆಯು ಬಂಡವಾಳಶಾಹಿ ಆಗಿರುವುದರಿಂದ ಇಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಬಡತನ, ಹಸಿವು ಇಂತಹ ಹಲವಾರು ಸಮಸ್ಯೆಗಳು ದುಡಿಯುವ ಜನಗಳನ್ನು ಕಿತ್ತು ತಿನ್ನುತ್ತಿವೆ. ಆ ಕಾರಣ ಭಗತ್ ಸಿಂಗ್ ಆಶಯದಂತೆ ಈ ಎಲ್ಲ ಸಮಸ್ಯೆಗೆ ಕೊನೆ ಹಾಡಿ ದುಡಿಯುವ ಜನಗಳ ಬದುಕನ್ನು ಹಸನು ಮಾಡುವ ಸಮಾಜವಾದಿ ಸಮಾಜದ ನಿರ್ಮಾಣ ಮಾಡಲು ನಾವೆಲ್ಲರೂ ಉನ್ನತ ನೀತಿ, ನೈತಿಕತೆ, ಸಂಸ್ಕೃತಿ, ಮೌಲ್ಯಪ್ರಜ್ಞೆ ಬೆಳೆಸಿಕೊಳ್ಳಲು ಈ ಸಂದರ್ಭದಲ್ಲಿ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ, ಎಐಡಿಎಸ್‌ಒ ವಿದ್ಯಾರ್ಥಿ ಮುಖಂಡ ಗಂಗರಾಜು ಅಳ್ಳಳ್ಳಿ, ಶರಣು ಪಾಟೀಲ್, ಸಂಘದ ಮುಖಂಡರಾದ ದೇವರಾಜ ಹೊಸಮನಿ, ಸಿದ್ದಲಿಂಗರೆಡ್ಡಿ, ರಮೇಶ್ ವಂಕಲಕುಂಟೆ, ಮಂಜುಳಾ ಮಜ್ಜಿಗಿ, ಶಾರದಾ ಗಡ್ಡಿ, ಮಲ್ಲಪ್ಪ, ದ್ಯಾಮಣ್ಣ ಡೊಳ್ಳಿನ ಇತರರಿದ್ದರು.