ಸಾರಾಂಶ
ಹಾವೇರಿ: ಸ್ವಾತಂತ್ರ್ಯ ಹೋರಾಟದ ಧ್ರುವತಾರೆ, ಕ್ರಾಂತಿ ಕಿಡಿ ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದವರು. ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರ ಮನದಲ್ಲಿ ಮೂಡಲಿ. ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವಜನರು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಬರಹಗಾರ, ಚಿತ್ರಕಾರ ನಾಮದೇವ ಕಾಗದಗಾರ ಹೇಳಿದರು.ನಗರದ ಎಸ್‌ಎಫ್‌ಐ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಆಯೋಜಿಸಿದ ಭಗತ್ ಸಿಂಗ್ ಅವರ 119ನೇ ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಭಗತ್ ಸಿಂಗ್ ಅಂದರೆ ರೋಮಾಂಚನಗೊಳುವ ಒಂದು ದೊಡ್ಡ ಶಕ್ತಿ. ಭಾರತದ ಸ್ವಾತಂತ್ರ‍್ಯ ಚಳವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಫೂರ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವಜನರ ಆಲೋಚನೆ ಮಾಡಬೇಕಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷ ನಂಜು ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನು ವಿರೋಧಿಸುವ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕಿದೆ ಎಂದರು.ಶ್ರೀಶಕ್ತಿ ತೆರೆದ ತಂಗುದಾಣದ ಮುಖ್ಯಸ್ಥ ಪುಟ್ಟಪ್ಪ ಹರವಿ ಮಾತನಾಡಿ, ಭಗತ್ ಸಿಂಗ್ ಅವರ ಮೇಲೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸಾಕಷ್ಟು ಪರಿಣಾಮ ಬೀರಿತು. ಆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಲು ಪ್ರಮುಖ ಕಾರಣಗಳಲ್ಲಿ ಇದು ಕೂಡ ಒಂದಾಗಿತ್ತು. ಜನರ ಹಿಂಸೆಯನ್ನು ಭಗತ್ ಸಹಿಸಿಕೊಳ್ಳಲಿಲ್ಲ. ಪ್ರತೀಕಾರ ಪಡೆದುಕೊಳ್ಳಬೇಕು ಎಂಬ ಕಿಚ್ಚು ಸ್ವಾತಂತ್ರ್ಯ ಚಳವಳಿಗೆ ನಾಂದಿಯಾಯಿತು. ಆದರಿಂದ ಭಗತ್ ಸಿಂಗ್ ಅವರನ್ನು ದೇಶದ ಭವಿಷ್ಯತ್ತಿನ ಮಕ್ಕಳು ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಮಾತನಾಡಿ, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಭಗತ್‌ಸಿಂಗ್ ಕಂಡ ಕನಸಿನ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಶೋಷಿತರ ಪರವಾದ ಭಗತ್‌ಸಿಂಗ್ ನಿಲುವು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲೆ ಮೂಡಿತ್ತೆಂದರೆ ಅವರ ವಯಸ್ಸಿಗೆ ಅವರ ಅಧ್ಯಯನವನ್ನು ಇಂದಿನ ಯುವಪೀಳಿಗೆ ಅನುಸರಿಸಬೇಕಿದೆ ಎಂದರು. ಭಗತ್‌ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಷ್ಟೆ ಅಲ್ಲದೆ ಭವಿಷ್ಯದಲ್ಲಿ ಭಾರತ ಹೇಗಿರಬೇಕೆಂದು ಕನಸು ಕಂಡವರು. ಜಾತಿ ತಾರತಮ್ಯ ನೀತಿಗಳು ಹೋಗಬೇಕು, ಧರ್ಮದ ಒಡೆದಾಳುವವರು, ಸಾಮ್ರಾಜ್ಯಶಾಹಿಗಳನ್ನು ದೇಶವನ್ನು ಬಿಟ್ಟು ಓಡಿಸಬೇಕು ಎಂದು ಹೇಳುತ್ತಿದ್ದ ಅವರು ಅಸ್ಪೃಶ್ಯತೆಯ ಬಗ್ಗೆ ಭಗತ್‌ಸಿಂಗ್ ತನ್ನ 16ನೇ ವಯಸ್ಸಿನಲ್ಲಿಯೇ ಲೇಖನವನ್ನು ಬರೆದಿದ್ದರು ಭಗತ್‌ಸಿಂಗ್ ಬಯಸಿದ್ದ ಭಾರತ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರುಣ್ ನಾಗವತ್, ಧನುಷ್ ದೊಡ್ಡಮನಿ ಆಯನ, ವಿರೇನ್ ಕಲಾಲ್, ಪ್ರಜ್ವಾಲ, ಸಂದೀಪ್ ವಾಲಿಕಾರ, ಮಣಿಕಂಠ ಪಾಟೀಲ, ಆಧ್ಯಾ ಎನ್ ಆರ್, ತೇಜಸ್ ಎನ್. ಡಿ., ಆರ್ಯ ಎನ್. ಆರ್., ಆಕಾಶ, ಶಾಹೇದ್ ಪೀರಖಾನವರ, ಹೇಮಂತ್, ಸಾಬೀರ್ ಫೀರಖಾನ್, ಗುದ್ಲೇಶ ಇಚ್ಚಂಗಿ ಮಂಜುನಾಥ ಹೋರಕೇರಿ, ರಮೇಶ ತೋಟದ, ಶಿವನಗೌಡ ಪಾಟೀಲ, ಅಭಿಷೇಕ್ ನಂದಣ್ಣನವರ, ಹಮ್ಮೀರ್ ಅಹಮದ್, ವಿನೋದ್, ಅಲ್ತಾಫ್, ಸಮ್ಮೇದ, ಮನೋಜ ಭರಮಪ್ಪ ಯಾರೇಶಿಮಿ, ಆಕಾಶ ದೂರಮುರಾಗಿ, ಲಕ್ಷ್ಮಣ ಕಟ್ಟಿಮನಿ, ವೈಭವ ಜಲಗೇರಿ, ಮಂಜಪ್ಪ ದುರಾಮುರಾಗಿ, ಮನೋಜ ಪುಟ್ಟಪ್ಪ ಹರವಿ ಸೇರಿದಂತೆ ಇತರರು ಇದ್ದರು.