ಸಾರಾಂಶ
ಮಾನಸಿಕ ಉನ್ನತಿ ಹಾಗೂ ಜೀವನ ಪರಿವರ್ತನೆಗೆ ಭಗವದ್ಗೀತೆಯ ಅಧ್ಯಯನ ತೀರಾ ಅವಶ್ಯ ಮತ್ತು ಅನಿವಾರ್ಯ
ಕುಮಟಾ; ಮಾನಸಿಕ ಉನ್ನತಿ ಹಾಗೂ ಜೀವನ ಪರಿವರ್ತನೆಗೆ ಭಗವದ್ಗೀತೆಯ ಅಧ್ಯಯನ ತೀರಾ ಅವಶ್ಯ ಮತ್ತು ಅನಿವಾರ್ಯ ಎಂದು ಮಿರ್ಜಾನದ ನಿವೃತ್ತ ಕರ್ನಲ್ ಪಿ.ಎಂ. ನಾಯ್ಕ ಹೇಳಿದರು.
ತಾಲೂಕಿನ ಮಿರ್ಜಾನದ ತಾರಿಬಾಗಿಲದಲ್ಲಿ ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರವಚನಕಾರರಾಗಿ ದೀವಗಿಯ ಶ್ರೀಮದ್ಭಗವದ್ಗೀತಾ ಪಾಠಶಾಲೆಯ ಸಂಚಾಲಕಿ ಎ.ಆರ್.ಭಾರತಿ ಮಾತನಾಡಿ ಕೇವಲ ಭಗವದ್ಗೀತೆಯ ಶ್ಲೋಕ ಪಠಣವನ್ನಷ್ಟೇ ಮಾಡಿದರೆ ಸಾಲದು, ಅದರ ಸಾರವನ್ನು ತಿಳಿದುಕೊಂಡಿದ್ದಲ್ಲಿ ಮಾತ್ರ ಮನಸ್ಸಿನ ಕಲ್ಮಶಗಳನ್ನು ತೊಡೆಯಲು ಸಾಧ್ಯ ಎಂದರು.
ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಗಣೇಶ ಅಂಬಿಗ ಮಾತನಾಡಿ, ಜೀವನಕ್ಕೆ ಬೇಕಾದ ಅತ್ಯಮೂಲ್ಯ ಮಾರ್ಗದರ್ಶನವನ್ನು ಹೊಂದಿರುವಂತಹ ಭಗವದ್ಗೀತೆಯ ಪ್ರವಚನದ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ ಅಬು ಮಹಮ್ಮದ್, ಸ್ಥಳೀಯರಾದ ಭಾಸ್ಕರ ಅಂಬಿಗ, ಗಂಗಾಧರ ಅಂಬಿಗ ಉಪಸ್ಥಿತರಿದ್ದರು.
ಸಪ್ತಮಿ ಡಿ. ಅಂಬಿಗ ಹಾಗೂ ಪಲ್ಲವಿ ಆರ್. ಮಡಿವಾಳ ಇವರ ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭವಾದ ಕಾಯಕ್ರಮದಲ್ಲಿ ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಂಬಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.