ಸಾರಾಂಶ
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸೋಮವಾರ ಯಲ್ಲಾಪುರದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಯಲ್ಲಾಪುರ: ಮಾನವನ ಬದುಕನ್ನು ರೂಪಿಸಲು ಶ್ರೇಷ್ಠವಾದ ಭಗವದ್ಗೀತೆಯನ್ನು ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅದನ್ನು ನಿತ್ಯವೂ ಪಠಿಸಿ, ಅಧ್ಯಯನ ಮಾಡುವುದರಿಂದ ನಮ್ಮ ಸಕಲ ಸಮಸ್ಯೆಗಳಿಗೂ ಪರಿಹಾರ ದೊರಕಿ, ಮೌಲಿಕ ಜೀವನ ನಡೆಸಲು ಪೂರಕ ನೆರವಾಗುತ್ತದೆ ಎಂದು ತಹಸೀಲ್ದಾರ ಅಶೋಕ ಭಟ್ಟ ಹೇಳಿದರು.
ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರು ಮಾತನಾಡಿದರು. ಶ್ರೀಕೃಷ್ಣನ ಬಾಲಲೀಲೆ, ತುಂಟತನ, ಆತನ ಜೀವನ ವೃತ್ತಾಂತದಿಂದ ಅರಿತಿದ್ದೇವೆ. ಜಗತ್ತಿನಲ್ಲಿಂದು ಶ್ರೀಕೃಷ್ಣ ನೀಡಿದ ಭಗವದ್ಗೀತೆಯನ್ನು ಮತ್ತು ಅದರ ಮಹತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇದೇ ಉದ್ದೇಶದಿಂದ ನಾವೆಲ್ಲರೂ ಭಗವಂತನ ಆರಾಧನೆಯನ್ನು ಮಾಡಿದ್ದೇವೆ ಎಂದರು.ಉಪ ತಹಸೀಲ್ದಾರ್ ಗೀತಾ ಜಾಧವ್ ಗೀತಾ ಜಯಂತಿ ಕುರಿತು ಉಪನ್ಯಾಸ ನೀಡಿ, ಕೃಷ್ಣನ ಕುರಿತು ಎಷ್ಟು ಮಾನಾಡಿದರೂ ಕಡಿಮೆಯೇ. ಭಗವಂತ ಹೇಳಿದಂತೆ "ಈ ಸಮಯ ಕಳೆದು ಹೋಗುತ್ತದೆ " ಎಂಬ ವಾಕ್ಯ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ವಾಸ್ತವಿಕವಾದುದಾಗಿದೆ. ಅದರಲ್ಲೂ ನಮ್ಮ ಕಂದಾಯ ಇಲಾಖೆಯಲ್ಲಿ ಸದಾ ನಮಗೆ ಮಾದರಿಯಾಗಿದೆ ಎಂದು ಕೃಷ್ಣನ ಅವತಾರದ ವಿವಿಧ ಸನ್ನಿವೇಶಗಳ ಚಿತ್ರಣವನ್ನು ನೀಡಿದರು. ಕಾರ್ಯಕ್ರಮದ ನಿಮಿತ್ತ ಆರಾಧ್ಯಾ ಶೇಟ್ ಶ್ರೀಕೃಷ್ಣನ ವೇಷ ಧರಿಸಿ, ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಗ್ರೇಡ್-೨ ತಹಸೀಲ್ದಾರ್ ಸಿ.ಜಿ. ನಾಯ್ಕ ಸ್ವಾಗತಿಸಿದರು. ಸಹಾಯಕ ಲೆಕ್ಕಾಧಿಕಾರಿ ಶ್ರೀಧರ ಮಡಿವಾಳ ನಿರ್ವಹಿಸಿ, ವಂದಿಸಿದರು. ಪಿಎಸ್‌ಐ ಸಿದ್ದು ಗುಡಿ, ಪಪಂ ಮುಖ್ಯಾಧಿಕಾರಿ ಸುನಿಲ ಗಾವಡೆ, ಮೋಜಣಿ ಇಲಾಖೆಯ ವನಿತಾ ಪಾಟೀಲ, ಸಿಡಿಪಿಒ ಇಲಾಖೆಯ ವೀರವ್ವ ಪೂಜಾರ್, ಹಿಂದುಳಿದ ಇಲಾಖೆಯ ದಾಕ್ಷಾಯಿಣಿ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ನಾಗೇಶ ಮಲಮೇತ್ರಿ ಉಪಸ್ಥಿತರಿದ್ದರು.