ಭಗವದ್ಗೀತೆ ಬದುಕಿನ ಭಾಗವಾಗಬೇಕು: ಆರತಿ ಪಟ್ರಮೆ

| Published : Dec 25 2023, 01:31 AM IST

ಸಾರಾಂಶ

ಶ್ರೀ ಕೃಷ್ಣ ಯುದ್ಧರಂಗದಲ್ಲಿ ಅರ್ಜುನನಿಗೆ ಬೋಧಿಸಿದ ಗೀತೆಯ ಸಾರವನ್ನು ನಾವೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಿಂದಿರುತ್ತದೆ

ಗೀತಾ ಜಯಂತಿ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ತುಮಕೂರು

ಇಂದಿನ ದಿನಗಳಲ್ಲಿ ಮನುಷ್ಯನ ಮನಸ್ಸು ಸಾತ್ವಿಕತೆಯಿಂದ ದೂರವಾಗುತ್ತಿದೆ. ಸಮಾಜದಲ್ಲಿ ಹಿಂಸೆ, ಶೋಷಣೆ, ಜಾತಿ ವಿವಾದ, ಸಂಸ್ಕಾರ ರಹಿತ ಚಟುವಟಿಕೆಗಳು ಜಾಸ್ತಿಯಾಗುತ್ತಿವೆ ಎಂದು ಲೇಖಕಿ, ಯಕ್ಷಗಾನ ಕಲಾವಿದೆ ಆರತಿ ಪಟ್ರಮೆ ಅಭಿಪ್ರಾಯಪಟ್ಟರು.

ನಗರದ ಶಿವಮೂಕಾಂಬಿಕಾ ಬಡಾವಣೆಯ ತುಮಕೂರು ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಾ. ವೆಂಕಟೇಶ ಜೋಯಿಸ್‌ ಅವರ ಗೃಹ ಸಭಾಂಗಣದಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಉದ್ಘಾಟಿಸಿ ಮಾತನಾಡಿದರು.

ಇಂದು ವಿದ್ಯಾರ್ಥಿಗಳಲ್ಲಿ ಗುರು-ಹಿರಿಯರಿಗೆ ಗೌರವ ನೀಡುವುದಾಗಲಿ, ನಗುಮುಖವಾಗಲಿ ಕಣ್ಮರೆಯಾಗುತ್ತಿದೆ. ಬದುಕಿನಲ್ಲಿ ಅನೇಕ ಏರು-ಪೇರುಗಳನ್ನು, ಸಂಸಾರದಲ್ಲಿ ಮತ್ತು ಸಾಮಾಜಿಕ ರಂಗದಲ್ಲಿ ಕಾಣುತ್ತಿದ್ದೇವೆ. ಬದುಕಿನ ಜಂಜಾಟ, ಗೊಂದಲ, ನೆಮ್ಮದಿ ಇಲ್ಲದ ಬದುಕು ಇವೆಲ್ಲ ನಮ್ಮಿಂದ ದೂರವಾಗಬೇಕಾದರೆ, ಶ್ರೀ ಕೃಷ್ಣ ಯುದ್ಧರಂಗದಲ್ಲಿ ಅರ್ಜುನನಿಗೆ ಬೋಧಿಸಿದ ಗೀತೆಯ ಸಾರವನ್ನು ನಾವೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಿಂದಿರುತ್ತದೆ ಎಂದರು.

ಗೀತೆಯಲ್ಲಿ ಶ್ರೀ ಕೃಷ್ಣನನು ಆರೋಗ್ಯ, ಸಂಸ್ಕಾರ, ಧೈರ್ಯ, ಪರಿಸರ, ನೆಲ-ಜಲ, ಅರಣ್ಯ ಮತ್ತು ಕಾಲ ಪ್ರತಿಯೊಂದಕ್ಕೂ ಭಗವದ್ಗೀತೆಯಲ್ಲಿ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಜೋಯಿಸರ ಗೀತಾ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ ಎಂದರು.

ಕಾರ್ಯದರ್ಶಿ ನಾ. ವೆಂಕಟೇಶ ಜೋಯಿಸರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಸಮಾಜದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರೂಣಹತ್ಯೆ, ಕಳ್ಳತನ, ದರೋಡೆ, ಗಲಭೆ, ಪ್ರಾಕೃತಿಕ ನಾಶ ಸಂಸ್ಕಾರಹೀನ ಬದುಕು ಈ ತರಹದ ಅಸುರಿ ಗುಣಗಳು ನಾಶವಾಗಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಗೀತೆ ಇದಕ್ಕೆ ಸಹಾಯಕವಾಗಬಲ್ಲದು. ಭಾರತೀಯ ಭಾಷೆಯನ್ನು ಹೊರತುಪಡಿಸಿ ವಿಶ್ವದ ೮೪ ಭಾಷೆಗಳಲ್ಲಿ ಭಗವದ್ಗೀತೆ ಮುದ್ರಿತವಾಗಿದೆ. ಇದು ಒಂದು ರಾಷ್ಟ್ರೀಯ ಗ್ರಂಥ. ಪಂಚಮವೇದ ಎಂದು ಕರೆಯುತ್ತಾರೆ. ಸುಮಾರು ೫ ಸಾವಿರ ವರ್ಷಗಳ ನಂತರವೂ ಭಗವದ್ಗೀತೆ ಹೆಚ್ಚು ಹೆಚ್ಚು ಪ್ರಚಾರಗೊಳ್ಳುತ್ತಿರುವುದರ ಕಾರಣ ಅದರಲ್ಲಿರುವ ತಾತ್ವಿಕ ಸತ್ವವೇ ಕಾರಣ. ಈ ಹಿನ್ನೆಲೆಯಲ್ಲಿ ಶ್ರೀ ಸೋಂದ ಸ್ವರ್ಣವಲ್ಲಿ ಶ್ರೀಗಳಾದ ಶ್ರೀಮದ್ ಶಂಕರಾಚಾರ್ಯ ಶ್ರೀ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಅವರ ಗೀತಾ ಪ್ರಚಾರ ಕಾರ್ಯ ಶ್ಲಾಘನೀಯವಾದದ್ದು ಎಂದರು.

ನೂರಾರು ಶ್ರೋತ್ರಿಯರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಗೀತಾ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಯಿತು. ಹಾಗೆ ಶ್ರೀಮತಿ ಸತ್ಯವತಿ ಜಯರಾಂ, ಮಂಜುಳಾ ಕೃಷ್ಣಮೂರ್ತಿ, ಪ್ರೇಮ ಜಯರಾಂ, ಗೀತಾ ಶ್ರೀನಿವಾಸ್‌ ಅವರು ಕುಮಾರವ್ಯಾಸ ಭಾರತದ ಪ್ರಮುಖ ಪದ್ಯಗಳನ್ನು ವಾಚಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಗರದ ಸಹಸ್ರಾರು ಜನ ವೈದೀಕರಿಗೆ ಸುಮಾರು ವರ್ಷಗಳಿಂದ ವೇದ ಪಾಠ ಮಾಡುತ್ತಿರುವ ಹಾಗೂ ಜಯನಗರ ಶ್ರೀ ವೆಂಕಟರಮಣ ದೇಗುಲದ ಟ್ರಸ್ಟಿಯೂ ಆಗಿರುವ ಶ್ರೀ ರಾಮಸ್ವಾಮಿ ಅಯ್ಯಂಗಾರ್‌ ಅವರನ್ನು ಗೀತಾ ಸಮಿತಿ ಜಯಂತಿ ಪರವಾಗಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಪ್ರಮುಖರಾದ ಎಚ್.ಎಸ್. ರಾಘವೇಂದ್ರ, ಶಶಿಧರ ಮೂರ್ತಿ, ಶ್ರೀಕಾಂತ್, ಗುರುಮೂರ್ತಿ ಅಡಿಗ, ಕ್ಯಾಪ್ಟನ್ ಸತ್ಯನಾರಾಯಣ, ಡಾ. ಸಿಬಂತಿ ಪದ್ಮನಾಭ, ಡಿ.ವಿ. ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು. ಶ್ರೀಕಾಂತ್ ನಿರೂಪಿಸಿದರು.ಫೊಟೊನಗರದ ಶಿವಮೂಕಾಂಬಿಕಾ ಬಡಾವಣೆಯ ತುಮಕೂರು ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಾ. ವೆಂಕಟೇಶ ಜೋಯಿಸ್‌ ಅವರ ಗೃಹ ಸಭಾಂಗಣದಲ್ಲಿ ಗೀತಾ ಜಯಂತಿ ಕಾರ್ಯಕ್ರಮವನ್ನು ಆರತಿ ಪಟ್ರಮೆ ಉದ್ಘಾಟಿಸಿದರು.