ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ನಿವೃತ್ತ ಡಿವೈಎಸ್‌ಪಿ ನಾಗರಾಜ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಗೀರಥ ಕೇವಲ ರಾಜನಾಗಿರದೆ ಒಬ್ಬ ಮಹಾನ್ ಛಲಗಾರ ಮತ್ತು ಪ್ರಯತ್ನಶೀಲ ವ್ಯಕ್ತಿಯಾಗಿದ್ದರೆಂದು ಜಿಲ್ಲಾ ಉಪ್ಪಾರ ಸಂಘದ ಗೌರವ ಅಧ್ಯಕ್ಷ ಹಾಗೂ ನಿವೃತ್ತ ಡಿವೈಎಸ್‌ಪಿ ಎಸ್.ನಾಗರಾಜ್ ಹೇಳಿದರು.ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಲಾದ ಭಗೀರಥ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯಭಾರ ತ್ಯಜಿಸಿ ಕಪಿಲ ಮಹರ್ಷಿಯ ಶಾಪದಿಂದ ಸುಟ್ಟು ಭಸ್ಮವಾಗಿದ್ದ ಸಗರ ಚಕ್ರವರ್ತಿಯ ಮಕ್ಕಳ ಸದ್ಗತಿಗಾಗಿ ಭಗೀರಥ ಹಿಮಾಲಯದಲ್ಲಿ ಕಠಿಣ ತಪಸ್ಸು ಮಾಡಿದರು. ಆತನನ್ನು ಉಪ್ಪಾರ ಕುಲತಿಲಕ ಎಂದು ಕರೆಯಲಾಗುತ್ತದೆ. ದೇವಗಂಗೆಯನ್ನು ಧರೆಗಿಳಿಸಿ ಪೂರ್ವಜರಿಗೆ ಮುಕ್ತಿ ನೀಡಿದ ಭಗೀರಥನ ಪ್ರಯತ್ನದಿಂದ ಇಡೀ ಭೂಮಂಡಲದ ಜೀವರಾಶಿಗಳು ಪಾವನವಾಗಿವೆ. ಮಾನವಕುಲಕ್ಕೆ ಒಳಿತಾಗಿದೆ ಎಂದರು.
ಉಪ್ಪಾರ ಸಮುದಾಯವು ಭಾರತದ ಸುಮಾರು 18 ರಾಜ್ಯಗಳಲ್ಲಿ ಹರಡಿಕೊಂಡಿದ್ದು, ಸ್ಥಳೀಯವಾಗಿ ವಿವಿಧ ಹೆಸರುಗಳಿಂದ ಗುರುತಿಸಲ್ಪಡುತ್ತದೆ. ಕರ್ನಾಟಕದಲ್ಲಿ ಉಪ್ಪಾರ ಸಮುದಾಯ ಅಧಿಕ ಜನಸಂಖ್ಯೆ ಹೊಂದಿದೆ. ಆದರೆ ನಿಗದಿತ ಪ್ರಮಾಣದ ರಾಜಕೀಯ ಪ್ರಾತಿನಿಧ್ಯ ದೊರಕಿಲ್ಲ. ಸರ್ಕಾರ ಸ್ಥಾಪಿಸಿರುವ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಭರಮಣ್ಣ ಉಪ್ಪಾರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮುದಾಯದವರು ಆರ್ಥಿಕವಾಗಿ ಸಬಲರಾಗಬೇಕು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ ಗಂಜಿಕಟ್ಟೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು 2014ರಲ್ಲಿ ಉಪ್ಪಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು. ಈ ನಿಗಮದ ಮೂಲಕ ಕೇವಲ ಶೇ.2 ರಿಂದ 4ರ ಬಡ್ಡಿದರದಲ್ಲಿ 1 ಲಕ್ಷ ರು.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಾರಥಿ ಯೋಜನೆಯಡಿ ಕಾರು ಪಡೆದು ಉದ್ಯಮ ಆರಂಭಿಸಲು ಅಥವಾ ಇತರ ಉದ್ಯೋಗ ಕ್ರಾಂತಿ ಮಾಡಲು 10 ರಿಂದ 15 ಲಕ್ಷ ರು.ವರೆಗೆ ನೆರವು ನೀಡುವ ಸೌಲಭ್ಯಗಳು ನಿಗಮದಲ್ಲಿವೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು ಮಾತನಾಡಿ, ಭಗೀರಥ ಮಹರ್ಷಿಗಳು ಕೇವಲ ಉಪ್ಪಾರ ಸಮಾಜಕ್ಕೆ ಸೀಮಿತವಾದವರಲ್ಲ, ಭೂಮಂಡಲದ ಪ್ರತಿಯೊಂದು ಜೀವಿಯೂ ಅವರನ್ನು ಸ್ಮರಿಸಬೇಕು. ಗಂಗೆಯನ್ನು ಧರೆಗೆ ತರುವ ಮೂಲಕ ಚರಾಚರ ವಸ್ತುಗಳಿಗೆ ಜೀವನಾಧಾರ ನೀಡಿದ್ದಾರೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಭಗೀರಥರು ಬ್ರಹ್ಮ ಮತ್ತು ಈಶ್ವರನನ್ನು ಒಲಿಸಿಕೊಂಡು ಗಂಗೆಯನ್ನು ತಂದರು. ಈ ‘ಭಗೀರಥ ಪ್ರಯತ್ನ'''''''' ಇಂದಿನ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆ. ಸೋಲೊಪ್ಪದೆ ಸತತವಾಗಿ ಪ್ರಯತ್ನಿಸುವುದನ್ನು ನಾವು ಅವರಿಂದ ಕಲಿಯಬೇಕು. ಭಗೀರಥರು ಬಾಲ್ಯದಲ್ಲೇ ಸಂಸಾರಿಕ ಸುಖವನ್ನು ತ್ಯಜಿಸಿ ತಪಸ್ಸಿನಲ್ಲಿ ನಿರತರಾದಂತೆ, ವಿದ್ಯಾರ್ಥಿಗಳು ಸಹ ತಮ್ಮ ವಿದ್ಯಾಭ್ಯಾಸವನ್ನು ಒಂದು ತಪಸ್ಸಿನಂತೆ ಸ್ವೀಕರಿಸಿ ಉನ್ನತ ಗುರಿ ತಲುಪಬೇಕು ಎಂದು ಕವಿಮಾತು ಹೇಳಿದರು.ತಹಸೀಲ್ದಾರ್ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮಾತನಾಡಿದರು. ಮೊಳಕಾಲ್ಮುರು ತಾಲ್ಲೂಕು ಚಿಕ್ಕೋಬನಹಳ್ಳಿಯ ಸಿ.ಎಂ.ಬಾಬು ಮತ್ತು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು.ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಿರೂಪಿಸಿದರು. ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಸುಮಾ.ಡಿ.ಎಸ್, ಜಿಲ್ಲಾ ಖಾಜನಾಧಿಕಾರಿ ಅಶೋಕ್, ಜಿಪಂ ಮಾಜಿ ಸದಸ್ಯ ಪಾಪಣ್ಣ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎನ್.ವೀರೇಶ್, ಪ್ರಧಾನ ಕಾರ್ಯದರ್ಶಿ ಎನ್.ಮಹೇಶ್, ಖಜಾಂಚಿ ಎಚ್.ಅಜ್ಜಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಎಸ್.ಸಿದ್ದಪ್ಪ ಉಪಸ್ಥರಿದ್ದರು.
ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಭಗಿರಥ ಭಾವಚಿತ್ರದ ಮೆರವಣಿಗೆ ಹಮಿಕೊಳ್ಳಲಾಗಿತ್ತು. ನಗರದ ಯುನಿಯನ್ ಪಾರ್ಕ್ ಮುಂದೆ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಶ್ರೀ ಭಗಿರಥ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.