ರಾಜ ಮಹರ್ಷಿ ಭಗೀರಥ ಪಾತಾಳದಲ್ಲಿದ್ದ ಗಂಗೆಯನ್ನೇ ಧರೆಗೆ ತಂದ ಮಹಾನುಭಾವ ಎಂದು ಪಶು ಸಂಗೋಪನೆ,ರೇಷ್ಮೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ ಮಹರ್ಷಿ ಭಗೀರಥ ಪಾತಾಳದಲ್ಲಿದ್ದ ಗಂಗೆಯನ್ನೇ ಧರೆಗೆ ತಂದ ಮಹಾನುಭಾವ ಎಂದು ಪಶು ಸಂಗೋಪನೆ,ರೇಷ್ಮೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯ ಪುರಸಭೆ ಬಯಲು ರಂಗ ಮಂದಿರದಲ್ಲಿ ನಡೆದ ರಾಜ ಮಹರ್ಷಿ ಭಗೀರಥ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕಲ ಜೀವರಾಶಿಗಳಿಗೆ ನೀರು ಕೊಟ್ಟವ ಭಗೀರಥ ಎಂದರು.
ಗುಂಡ್ಲುಪೇಟೆ ತಾಲೂಕಲ್ಲಿ ಬರಗಾಲ ಇದೆ ನಾನೂ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದೇನೆ.ಬರದ ಬಗ್ಗೆ ವಿಶೇಷ ಗಮನ ಹರಿಸುತ್ತೇನೆ ಎಂದು ಹೇಳಿ ಭಗೀರಥ ಜಯಂತಿ ಶುಭಾಶಯ ಕೋರಿದರು.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ನೀರು ಮನುಷ್ಯನಿಗೆ ಅತ್ಯಂತ ಮುಖ್ಯ.ನೀರನ್ನು ಭಗೀರಥ ಪ್ರಯತ್ನ ಮಾಡಿ ಭೂಲೋಕಕ್ಕೆ ತಂದ ಕಾರಣಕ್ಕೆ ಭಗೀರಥ ಎಂಬ ಮಾತು ಚಾಲ್ತಿಯಲ್ಲಿದೆ ಅಲ್ಲದೆ ಭಗೀರಥ ಹೆಸರು ಕೇಳಿದಾಕ್ಷಣ ನೀರು ನೆನಪಾಗುತ್ತದೆ ಎಂದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ತನ್ನ ತಪಸ್ಸು ಹಾಗೂ ಹಠದಿಂದ ಗಂಗೆ ತಂದರು ಎಂದರಲ್ಲದೆ ನಾನೂ ಕೂಡ ಮೊದಲಿನಿಂದಲೂ ಉಪ್ಪಾರ ಜನಾಂಗಕ್ಕೆ ಆದ್ಯತೆ ನೀಡುತ್ತಾ ಬಂದಿದ್ದೇನೆ.ಮುಂಬರುವ ಗ್ರಾಪಂ,ತಾಪಂ, ಜಿಪಂ ಚುನಾವಣೆಯಲ್ಲಿ ಉಪ್ಪಾರರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ ಎಂದು ಭರವಸೆ ನೀಡಿದರು.ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ್ ಉಪ್ಪಾರ್, ರಾಜ್ಯ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ರಾಮಚಂದ್ರ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ವಿಜಯಕುಮಾರ್,ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹಲವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ, ನಗದು ಬಹುಮಾನ ವಿತರಿಸಿದರು.ಸಮಾರಂಭದ ಬಳಿಕ ಭಗೀರಥ ಮೆರವಣಿಗೆಗೆ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಭಗೀರಥ ಪೀಠಾಧೀಶ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಚಾಲನೆ ನೀಡಿ ಆಶೀರ್ವಚನ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಗೀರಥ ಮೆರವಣಿಗೆ ಸಾವಿರಾರು ಜನರ ನಡುವೆ ಸಾಗಿತು.
ಅಯ್ಯನ ಸರಗೂರು ಮಠಾಧೀಶ ಮಹದೇವಸ್ವಾಮೀಜಿ, ತಹಸೀಲ್ದಾರ್ ಎಂ.ಎಸ್.ತನ್ಮಯ್,ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್,ಗ್ರಾಪಂ ಮಾಜಿ ಅಧ್ಯಕ್ಷ ಬಿ.ಜಿ.ಶಿವಕುಮಾರ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಶಿವು ಶಂಕರ್ ಸೇರಿದಂತೆ ತಾಲೂಕಿನ ಗಡಿಕಟ್ಟೆ ಗುರುಮನೆ ಯಜಮಾನರು,ಭಗೀರಥ ಸಂಘಟನೆಗಳು ಪದಾಧಿಕಾರಿಗಳು,ಯುವಕರು,ಮಹಿಳೆಯರು ಇದ್ದರು.ಭಗೀರಥ ಭವನಕ್ಕೆ ₹೪ ಕೋಟಿ: ಶಾಸಕ ಗಣೇಶ್
ಗುಂಡ್ಲುಪೇಟೆ ಪಟ್ಟಣದಲ್ಲಿ ಭಗೀರಥ ಭವನಕ್ಕೆ ೪ ಕೋಟಿ ಅನುದಾನ ನೀಡುವ ಮೂಲಕ ಕಾಮಗಾರಿಗೆ ಚಾಲನೆ ಕೊಡಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ಭಗೀರಥ ಜಯಂತಿಯಲ್ಲಿ ಮಾತನಾಡಿ, ಗುಂಡ್ಲುಪೇಟೆಯ ಉಪ್ಪಾರ ಸಮುದಾಯ ಭವನಕ್ಕೆ ೩೦ ಲಕ್ಷ ಹಾಕಿದ್ದಾರೆ ಅಂತ ಹೇಳ್ತಾರೆ! ಆದ್ರೆ ಅದು ಬರಿ ಪೇಪರ್‌ನಲ್ಲಿ ಇದೆ ಅಷ್ಟೆ ಎಂದರು.
ಆದರೆ ನಾನು ಈ ವರ್ಷ ಮುಖ್ಯಮಂತ್ರಿಗಳು ನನಗೆ ನೀಡುವ ವಿಶೇಷ ಅನುದಾನದಲ್ಲಿ ಉಪ್ಪಾರ ಸಮುದಾಯ ಭವನಕ್ಕೆ ೪ ಕೋಟಿ ಅನುದಾನ ನೀಡುವ ಮೂಲಕ ಭವನಕ್ಕೆ ಚಾಲನೆ ಕೊಡುತ್ತೇನೆ ಎಂದರು.ತಾಲೂಕಲ್ಲಿ ಮಳೆ ಬಾರದೇ ಇರೋದು ದೊಡ್ಡ ಸಮಸ್ಯೆಯಾಗಿದೆ.ತಾಲೂಕಿಗೆ ನಾಳೆ ಕಂದಾಯ ಸಚಿವರು ಪ್ರವಾಸ ಮಾಡಲಿದ್ದಾರೆ.ಬೆಳೆ ನಷ್ಟದ ಮಾಹಿತಿ ಪಡೆದು ಬಳಿಕ ಕ್ಯಾಬಿನೆಟ್ ನಲ್ಲಿ ಬರ ಪರಿಹಾರ ಘೋಷಣೆ ಮಾಡಲಿದೆ ರಾಜ್ಯ ಸರ್ಕಾರ ಎಂದರು.