ಸಾರಾಂಶ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಶಹಾಪುರದ ದೋರನಹಳ್ಳಿಯ ಕೌದಿ ಕಲೆಯ ಕಲಾವಿದರಾದ ಭಾಗೀರಥಿ ಸಂಗಣ್ಣ ಮಲಗೊಂಡ ಅವರಿಗೆ ಲಕ್ಷಮ್ಮ ನಾಗೆಗೌಡ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಪ್ರತಿವರ್ಷ ಕೊಡಮಾಡುವ ರಾಜ್ಯ ಮಟ್ಟದ ಲಕ್ಷಮ್ಮ ನಾಗೇಗೌಡ ಜಾನಪದ ಲೋಕ ಪ್ರಶಸ್ತಿಗೆ ಈ ವರ್ಷ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಕೌದಿ ಕಲೆಯ ಕಲಾವಿದರಾದ ಭಾಗೀರಥಿ ಸಂಗಣ್ಣ ಮಲಗೊಂಡ ಅವರಿಗೆ ರಾಮನಗರದ ಜಾನಪದ ಲೋಕದಲ್ಲಿ ನಡೆದ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಲೋಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಆದಿಚುಂಚನಗಿರಿ ಮಠದ ಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಪ್ರೊ.ರಾಮಚಂದ್ರೆಗೌಡ ಅಧ್ಯಕ್ಷತೆಯಲ್ಲಿ ನಿವೃತ್ತ ಲೋಕಾಯುಕ್ತ ಡಾ. ಸಂತೋಷ ಹೆಗಡೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಸಿದ್ಧ ಗಾಯಕ ನಾದಬ್ರಹ್ಮ ಹಂಸಲೇಖ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಬೋರಲಿಂಗಯ್ಯ, ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟ ಆದಿತ್ಯನಂದಿರಾಜ ಸೇರಿ ಶಾಸಕರು, ಜನಪ್ರತಿನಿಧಿಗಳು, ಜನಪದ ತಜ್ಞರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.ಪ್ರಶಸ್ತಿಯು ₹15,000 ನಗದು, ಸ್ಮರಣ ಫಲಕ, ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಯಿತು.
ಕಳೆದ ಹಲವು ದಶಕಗಳಿಂದ ಕೌದಿ ಕಲೆಯ ಜೊತೆಗೆ ವಿಶಿಷ್ಟ ಕಲಾಕೃತಿಗಳ ರಚನೆಯಲ್ಲಿ ತೊಡಗಿರುವ ಭಾಗೀರತಿ ಮಲಗೊಂಡ ಅವರ ಆಯ್ಕೆಯನ್ನು ಕರ್ನಾಟಕ ಜಾನಪದ ಪರಿಷತ್ತು, ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.