ಸಾರಾಂಶ
ಚಿತ್ರದುರ್ಗ: ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ, ಬೆಂಗಳೂರು ವಿಭಾಗದ ಉಸ್ತುವಾರಿ ಪಿ.ಆರ್.ರಮೇಶ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಬಿಎಲ್ಎಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ರಾಜ್ಯದ ಜನತೆಗೆ ನೀಡಲಾಗಿದ್ದ ಭರವಸೆಗಳನ್ನು ಪೂರೈಸಲಾಗಿದೆ. ಈ ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಪಕ್ಷಕ್ಕಾಗಿ ಶ್ರಮಪಟ್ಟು ದುಡಿಯುತ್ತಿರುವ ಕಾರ್ಯಕರ್ತರು ನಮಗೆ ಏನು ಅಧಿಕಾರ ಸಿಗಲಿಲ್ಲವೆಂದು ಕೊರಗುವುದು ಬೇಡ. ಸೇವೆ ಗುರುತಿಸಿ ನಾಯಕರು ಒಂದಲ್ಲ ಒಂದು ದಿನ ಅಧಿಕಾರ ನೀಡುತ್ತಾರೆ. ಅಲ್ಲಿಯವರೆಗೂ ಸಮಾಧಾನದಿಂದಿರಿ ಎಂದು ವಿನಂತಿಸಿದರು.ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದೆಯೆಂದರೆ ಅದಕ್ಕೆ ಕಾರ್ಯಕರ್ತರ ಪರಿಶ್ರಮ ಕಾರಣ. ರಾಜ್ಯದಲ್ಲಿ 53 ಸಾವಿರ ಬೂತ್‍ಗಳಿವೆ. 33 ಸಾವಿರ ಬಿಎಲ್ಎ ಗಳಿದ್ದಾರೆ. ಈಗ ಬಿಎಲ್ಎಟುಗಳನ್ನು ನೇಮಕ ಮಾಡಬೇಕು. ಅದರ ಜವಾಬ್ದಾರಿ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ನೀಡಲಾಗಿದೆ. ಅಭಿವೃದ್ದಿ ಮಾಡದಿದ್ದರೂ ಬಿಜೆಪಿ ಯವರು ಗೆಲ್ಲುತ್ತೇವೆಂಬ ಭ್ರಮೆಯಲ್ಲಿದ್ದಾರೆ. ರಾಜ್ಯದಿಂದ ಗೆದ್ದು ಹೋಗಿರುವ ಬಿಜೆಪಿ ಎಂಪಿ ಗಳು ಪಾರ್ಲಿಮೆಂಟ್‍ನಲ್ಲಿ ರಾಜ್ಯದ ಪರ ಧ್ವನಿ ಎತ್ತುತ್ತಿಲ್ಲ. ಪ್ರಜಾಪ್ರಭುತ್ವ ಕುಸಿಯುತ್ತಿದೆ. ಮುಂದಿನ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದರು.
ಬಿಎಲ್‍ಎಟುಗಳ ಜೊತೆ 20 ಜನರ ತಂಡ ರಚನೆಯಾಗುತ್ತದೆ. ಪ್ರತಿ ಬೂತ್‍ನಲ್ಲಿ ಎಲ್ಲಾ ಜಾತಿ ಧರ್ಮದವರಿರಬೇಕು. ಕೇಡರ್ ಬೇಸ್ ಪಾರ್ಟಿ ರೀತಿ ಕೆಲಸ ಮಾಡುತ್ತೇವೆ. ಬೂತ್‍ನಲ್ಲಿ ಪಕ್ಷ ಬೆಳೆಯಬೇಕಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಚುನಾವಣೆಗೆ ಇದು ಬುನಾದಿಯಾಗಲಿದೆ ಎಂದರು ಹೇಳಿದರು.ಚಿತ್ರದುರ್ಗ ಲೋಕಸಭಾ ಬಿಎಲ್‍ಎ ನೇಮಕಾತಿ ಉಸ್ತುವಾರಿ ಎ.ಎಂ.ಅಮೃತೇಶ್ವರಸ್ವಾಮಿ, ಮುನೀರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ಲಾ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ, ಪ್ರೊಫೆಷನಲ್ ಸೆಲ್ ವಿಭಾಗದ ಅಧ್ಯಕ್ಷ ಮಹಡಿ ಶಿವಮೂರ್ತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್ ವೇದಿಕೆಯಲ್ಲಿದ್ದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರುಗಳು ಸಭೆಯಲ್ಲಿ ಹಾಜರಿದ್ದರು.