ಪ್ರವಾಸಿ ಮಂದಿರ ವೃತ್ತದಲ್ಲಿ ಪುರಸಭೆ ಅಧಿಕಾರಿಗಳಿಂದ ಭಗವಾಧ್ವಜ ತೆರವು: ಖಂಡನೆ

| Published : Jul 15 2024, 01:52 AM IST

ಪ್ರವಾಸಿ ಮಂದಿರ ವೃತ್ತದಲ್ಲಿ ಪುರಸಭೆ ಅಧಿಕಾರಿಗಳಿಂದ ಭಗವಾಧ್ವಜ ತೆರವು: ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾರಿಸಿದ್ದ ಕಳಸ ತಳಹದಿಯ ಕೇಸರಿ ಬಣ್ಣದ ಧರ್ಮದ್ವಜವನ್ನು ಪೊಲೀಸರ ನೆರವಿನೊಂದಿಗೆ ಪುರಸಭೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾರಿಸಿದ್ದ ಕಳಸ ತಳಹದಿಯ ಕೇಸರಿ ಬಣ್ಣದ ಧರ್ಮದ್ವಜವನ್ನು ಪೊಲೀಸರ ನೆರವಿನೊಂದಿಗೆ ಪುರಸಭೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಧರ್ಮಧ್ವಜ ತೆರವುಗೊಳಿಸಿದ ಪುರಸಭೆ ಹಾಗೂ ಪೊಲೀಸರ ನಡೆ ವಿರೋಧಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವಿವಾದಕ್ಕೆ ಕಾರಣ:

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಧ್ವಜಸ್ತಂಭ ನಿರ್ಮಿಸಿ ಕಳೆದ 40 ವರ್ಷಗಳಿಂದಲೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಕೇಸರಿ ಬಣ್ಣದ ಭಗವಾಧ್ವಜವನ್ನು ಹಾರಿಸುತ್ತಿದ್ದರು. ಯಾವುದೇ ವಿವಾದವಿಲ್ಲದೆ ವೃತ್ತದಲ್ಲಿ ಧರ್ಮಧ್ವಜ ಹಾರಾಡುತ್ತಿತ್ತು.

ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ವೇಳೆ ಹಾರಾಡುತ್ತಿದ್ದ ಧರ್ಮಧ್ವಜದ ತಲೆ ಮೇಲೆ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ನೀಲಿ ಭಾವುಟವನ್ನು ಹಾರಿಸಿದರು.

ನಂತರ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಪುರಸಭೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಗೆ ಮುಂದಾಗಿರಲಿಲ್ಲ. ಚುನಾವಣೆ ಮುಗಿದ ನಂತರವೂ ಕೆಲ ಕಾಲ ಹಿಂದೂಪರ ಸಂಘಟನೆಗಳ ಧರ್ಮಧ್ವಜ ಹಾಗೂ ಅದರ ನೆತ್ತಿಯ ಮೇಲೆ ನೀಲಿ ಧ್ವಜ ಹಾರಡುತ್ತಲೇ ಇತ್ತು.

ಕಳೆದ ಜೂನ್ ತಿಂಗಳಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಧರ್ಮಧ್ವಜದ ತಲೆ ಮೇಲೆ ಹಾರಾಡುತ್ತಿದ್ದ ನೀಲಿ ಧ್ವಜವನ್ನು ತೆಗೆದು ಹೊಸದಾಗಿ ಭಗವಾಧ್ವಜ ಹಾರಿಸಿದರು. ನೀಲಿ ಧ್ವಜ ತೆಗೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕ್ರಮವನ್ನು ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾದರು.

ಇತ್ತೀಚೆಗೆ ಮಂಡ್ಯ ತಾಲೂಕು ಕೆರೆಗೂಡು ಗ್ರಾಮದಲ್ಲಿ ಉಂಟಾಗಿದ್ದ ಹನುಮಧ್ವಜ ವಿವಾದದಂತೆ ಕೆ.ಆರ್.ಪೇಟೆ ಪಟ್ಟಣದಲ್ಲಿಯೂ ಧ್ವಜ ದಂಗಲ್ ಆರಂಭಗೊಳ್ಳುವ ಸುಳಿವು ಅರಿತ ಪಟ್ಟಣ ಪೊಲೀಸರು ಪ್ರವಾಸಿ ಮಂದಿರ ವೃತ್ತದಲ್ಲಿ ಹಾರಾಡುತ್ತಿದ್ದ ಧರ್ಮಧ್ವಜವನ್ನು ಧ್ವಜಸ್ತಂಭದ ಸಮೇತ ತೆರವುಗೊಳಿಸಿ ವೃತ್ತದ ಸುತ್ತ ಬ್ಯಾರೀಕೆಡ್ ಹಾಕಿ ಯಾವುದೇ ಅಹಿತರ ಘಟನೆಗಳಿಗೆ ಆಸ್ಪದವಾಗದಂತೆ ಪರಿಸ್ಥಿತಿ ನಿಯಂತ್ರಿಸಿದ್ದರು.

ಕಳೆದ ಜುಲೈ 13 ರಾತ್ರಿ ಯಾವುದೇ ರೀತಿಯ ಸುಳಿವು ನೀಡದೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೊಸದಾಗಿ ಕಳಸ ಮಾದರಿಯ ತಳಹದಿ ಹೊಂದಿದ್ದ ಧ್ವಜ ಸ್ತಂಭವನ್ನು ನಿರ್ಮಿಸಿ ಪ್ರವಾಸಿ ಮಂದಿರ ವೃತ್ತದಲ್ಲಿ ಅಳವಡಿಸಿ ಕೇಸರಿ ಬಣ್ಣದ ಧರ್ಮ ಧ್ವಜವನ್ನು ಆರೋಹಣ ಮಾಡಿದ್ದರು.

ಧ್ವಜ ಸಂಬಂಧ ಯಾವುದೇ ವಿವಾದ ಉಂಟಾಗಬಾರದೆಂಬ ಕಾರಣದಿಂದ ಧ್ವಜಸ್ತಂಭದ ಕೆಳಭಾಗದಲ್ಲಿನ ಕಳಸ ಮಾದರಿಯ ನಿರ್ಮಾಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ವೀರ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡ, ಮಡಿವಾಳ ಮಾಚಿದೇವರು ಮುಂತಾದ ಮಹಾನ್ ನಾಯಕರು ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಅಳವಡಿಸಿದ್ದರು.

ಧರ್ಮಧ್ವಜ ಹಾರಾಡಿದ ಕೆಲವೇ ಗಂಟೆಗಳಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರು ಭಾನುವಾರ ಮುಂಜಾನೆ 4 ಗಂಟೆ ವೇಳೆ ಪ್ರವಾಸಿ ಮಂದಿರ ವೃತ್ತದಲ್ಲಿದ್ದ ಕಳಸ ಮಿಶ್ರಿತ ಧರ್ಮಧ್ವಜವನ್ನು ತೆರವುಗೊಳಿಸಿಸಲು ಮುಂದಾದರು.

ಧರ್ಮಧ್ವಜ ತೆರವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಹಾಗೂ ಪೊಲೀಸರ ನಡೆಯನ್ನು ಖಂಡಿಸಿ ಪ್ರವಾಸಿ ಮಂದಿರ ವೃತ್ತದಲ್ಲಿಯೇ ಪ್ರತಿಭಟನೆ ಆರಂಭಿಸಿದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಾಂಡವಪುರ ಉಪ ವಿಭಾಗಧಿಕಾರಿ ನಂದೀಶ್ ಹಾಗೂ ನಾಗಮಂಗಲ ಡಿವೈಎಸ್ಪಿ ಡಾ.ಸುಮಿತ್ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ಸರ್ಕಾರದ ಯಾವುದೇ ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರತಿಮೆ ಹಾಗೂ ಧ್ವಜಗಳನ್ನು ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೂಪರ ಸಂಘಟನೆಗಳು ಪುರಸಭೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಿ. ಪುರಸಭೆ ಅನುಮೋದಿಸಿದರೆ ಅದನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗುವುದು. ಸರ್ಕಾರ ಅನುಮತಿ ನೀಡಿದರೆ ಪ್ರವಾಸಿ ಮಂದಿರ ವೃತ್ತದಲ್ಲಿ ಧರ್ಮಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು. ಆನಂತರ ಪ್ರತಿಭಟನೆಯನ್ನು ಕೈಬಿಟ್ಟ ಹಿಂದೂ ಕಾರ್ಯಕರ್ತರು ಭಗವಾಧ್ವಜ ಸ್ಥಂಭವನ್ನು ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಹೋದರು.

ಪುರಸಭೆಯಲ್ಲಿ ಸಂಘಟನೆ ಮುಖಂಡ ನಟರಾಜು ನೇತೃತ್ವದಲ್ಲಿ ಕೇಸರಿ ಶ್ರೀನಿವಾಸ್, ಎಚ್.ಬಿ.ಮಂಜುನಾಥ್, ಪ್ರವೀಣ್, ಮನು, ರಾಜೇಂದ್ರ, ಮುರುಗೇಶ್, ಒಕ್ಕಲಿಗರ ಸಂಘದ ಮುಖಂಡ ನಾರಾಯಣಗೌಡ, ತಾಲೂಕು ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಸೇರಿದಂತೆ ಹಲವರಿದ್ದರು.

ಪುರಸಭೆ ಮುಖ್ಯಾಧಿಕಾರಿ ರಾಜು ವಠಾರ, ಇನ್ಸ್ ಪೆಕ್ಟರ್ ಆನಂದೇಗೌಡ, ಪಿ.ಎಸ್.ಐಗಳಾದ ನವೀನ್, ಸುಬ್ಬಯ್ಯ ನೇತೃತ್ವದ ಪೊಲೀಸರ ತಂಡ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಬಂದೋಬಸ್ತ್ ಏರ್ಪಡಿಸಿತ್ತು.ಕಳೆದ 40 ವರ್ಷಗಳಿಂದ ಪ್ರವಾಸಿ ಮಂದಿರ ವೃತ್ತದಲ್ಲಿ ಭಗವಾಧ್ವಜ ಹಾರಾಡುತ್ತಿದೆ. ಇದಕ್ಕೆ ಯಾರು ವಿರೋಧ ಮಾಡಿಲ್ಲ. ಆದರೆ, ಈಗ ಕೆಲವರು ಉದ್ದೇಶ ಪೂರ್ವಕವಾಗಿ ವಿವಾದದ ಸ್ವರೂಪ ನೀಡುತ್ತಿದ್ದಾರೆ. ಹಿಂದೂ ಸಮುದಾಯಗಳ ನಡುವೆ ಭಿನ್ನಮತ ಹುಟ್ಟು ಹಾಕಲು ಕೇಸರಿ ಧ್ವಜ ತೆರವುಗೊಳಿಸಲು ರಾಜ್ಯ ಸರ್ಕಾರವೇ ಕೆಲವು ಸಂಘಟನೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ.

-ನಟರಾಜ್ , ಹಿಂದೂಪರ ಸಂಘಟನೆಗಳ ಮುಖಂಡ