ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವಂತೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿ ವಿರೋಧಿಸಿ ದೀರ್ಘಕಾಲೀನ ಹೋರಾಟ ನಡೆಸಿದ್ದ ಕಾಮ್ರೆಡ್‌ ಭಗವಾನ್ ರೆಡ್ಡಿ ಇತರೆ ನಾಯಕರನ್ನು ಬಂಧಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಎಐಕೆಕೆಎಂಎಸ್ ಮತ್ತು ಎಸ್‌ಕೆಎಂ ಸಂಘಟನೆಗಳ ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಪ್ರತಿಭಟಿಸಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವಂತೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿ ವಿರೋಧಿಸಿ ದೀರ್ಘಕಾಲೀನ ಹೋರಾಟ ನಡೆಸಿದ್ದ ಕಾಮ್ರೆಡ್‌ ಭಗವಾನ್ ರೆಡ್ಡಿ ಇತರೆ ನಾಯಕರನ್ನು ಬಂಧಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಎಐಕೆಕೆಎಂಎಸ್ ಮತ್ತು ಎಸ್‌ಕೆಎಂ ಸಂಘಟನೆಗಳ ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಪ್ರತಿಭಟಿಸಿತು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಉಭಯ ಸಂಘಟನೆಗಳ ನೇತೃತ್ವದಲ್ಲಿ ಬಂಧಿತ ಕಾಮ್ರೆಡ್ ಭಗವಾನ್ ರೆಡ್ಡಿ ಇತರೆ ಬಂಧಿತ ನಾಯಕರನ್ನು ಬೇಷರತ್ ಆಗಿ ಬಿಡುಗಡೆ ಮಾಡುವ ಜತೆಗೆ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುವ ಜತೆಗೆ ಎಸಿ ಕಚೇರಿ ಅಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ವಿಜಯಪುರದಲ್ಲಿ ಬಂಧಿತ ಭಗವಾನ್ ರೆಡ್ಡಿ ಹಾಗೂ ಇತರೆ ನಾಯಕರನ್ನು ಬಂಧಿಸಿದ್ದು ಸರಿಯಲ್ಲ. ತಕ್ಷಣವೇ ಬಂಧಿತ ಎಲ್ಲರನ್ನೂ ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ರಾಷ್ಟ್ರೀಯ ಮಂಡಳಿ ಸದಸ್ಯ, ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ ಜನಪರ, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದರು ಎಂದರು.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವಂತೆ ಒತ್ತಾಯಿಸಿ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯನ್ನು ವಿರೋಧಿಸುವ ದೀರ್ಘಕಾಲೀನ ಜನಾಂದೋಲನವನ್ನು ಮುನ್ನಡೆಸುತ್ತಿರುವ ಪ್ರಮುಖ ನಾಯಕರಾಗಿದ್ದು, ಹಲವು ದಿನಗಳಿಂದಲೂ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತಿದ್ದವರು. ಈ ಚಳವಳಿಗೆ ವಿಜಯಪುರ ಜಿಲ್ಲಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು ಎಂದು ತಿಳಿಸಿದರು.

ವಿಜಯಪುರದಲ್ಲಿ ಶುಕ್ರವಾರ ಉಸ್ತುವಾರಿ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಕಾಮ್ರೇಡ್ ಭಗವಾನ್ ರೆಡ್ಡಿ ಇತರೆ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ, ಗಂಭೀರ ಹಾಗೂ ಜಾಮೀನು ರಹಿತ ಸೆಕ್ಷನ್‌ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಹೋರಾಟವನ್ನು ಹತ್ತಿಕ್ಕುವ, ಹೋರಾಟದ ನೇತೃತ್ವ ವಹಿಸಿದವರನ್ನು ಬಂಧಿಸುವ ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಜನರ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಕಾಮ್ರೇಡ್ ಭಗವಾನ್ ರೆಡ್ಡಿ ಹಾಗೂ ರೈತ, ರೈತ ಕಾರ್ಮಿಕರು, ಮಹಿಳೆಯರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಶನಿವಾರ ದೇಶ‍್ಯಾಪಿ ಹೋರಾಟ ನಡೆಸಿದ್ದೇವೆ, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರಜಾಸತ್ತಾತ್ಮಕ ಚ‍ಳವಳಿಗಳ ಮೇಲಿನ ದಮನ ನಿಲ್ಲಿಸುವಂತೆ ಸರ್ಕಾರಕ್ಕೆ ಎಚ್ಚರಿಸಿದರು.

ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಆವರಗೆರೆ ಉಮೇಶ, ಎಐಕೆಕೆಎಂಎಸ್‌ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರ ಹನುಮಂತಪ್ಪ, ಕರ್ನಾಟಕ ಶಕ್ತಿ ಸತೀಶ ಅರವಿಂದ, ಆಲ್ ಇಂಡಿಯಾ ಕಿಸಾನ್ ಸಭಾದ ಐರಣಿ ಚಂದ್ರು, ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್‌ನ ಪರಶುರಾಮ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.