ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಾದ್ಯಂತ ಸಮರ್ಪಕ ಮಳೆಯಾಗದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸವಣೂರು: ಹಾವೇರಿ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಒತ್ತಾಯಿಸಿ ಬಿಜೆಪಿ ಪದಾಧಿಕಾರಿಗಳು ಹಾಗೂ ಸದಸ್ಯರು ಇತ್ತೀಚೆಗೆ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ರವಿಕುಮಾರ ಕೊರವರ ಅವರಿಗೆ ಮನವಿ ಸಲ್ಲಿಸಿದರು.

ಶ್ರಾವಣ ಮಾಸದ ಕೊನೆಯ ಸೋಮವಾರ, ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಯ ಮುಂದೆ ಭಜನೆ ಹಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಈ ಮೂಲಕ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಾದ್ಯಂತ ಸಮರ್ಪಕ ಮಳೆಯಾಗದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಆರ್ಥಿಕವಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಆತಂಕವೂ ಎದುರಾಗಿದೆ. ಮಳೆ ಕೊರತೆಯಿಂದ ರೈತರ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಆಧಾರಿತ ಕುಟುಂಬಗಳ ಬದುಕು ದುಸ್ತರವಾಗಿದೆ.ಹಾವೇರಿ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ರೈತರಿಗೆ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಅಗತ್ಯವಿರುವ ಎಲ್ಲಾ ಬರ ಪರಿಹಾರ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಮನವಿಯನ್ನು ತುರ್ತಾಗಿ ಪರಿಗಣಿಸಿ, ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಬಿಜೆಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗಂಗಾಧರ ಬಾಣದ, ಪದಾಧಿಕಾರಿಗಳಾದ ಜಯಣ್ಣ ಶೆಟ್ಟರ್, ಮುತ್ತಣ್ಣ ಮುಷ್ಠಿ, ಅಶೋಕ ಅರಿಕಟ್ಟಿ, ಹನುಮಂತಗೌಡ ಮುದಿಗೌಡ್ರ, ಶ್ರೀನಿವಾಸ ಗಿತ್ತೆ, ಧರಿಯಪ್ಪಗೌಡ ಪಾಟೀಲ, ಮಲ್ಲಾರಪ್ಪ ತಳ್ಳಿಹಳ್ಳಿ, ಅಶೋಕ ಯಲಿಗಾರ, ಮಹೇಶ ಮುದಗಲ್, ಹರೀಶಗೌಡ ಪಾಟೀಲ, ಪ್ರವೀಣ ಬಾಲೇಹೋಸೂರ, ಪರಶುರಾಮ ಸಾತಪತಿ, ದುರಗಪ್ಪ ಗಡೆದ, ಕಾಂತೇಶ ವಾಲ್ಮೀಕಿ, ನಿಂಗಪ್ಪ ಬಂಕಾಪೂರ, ಸಂತೋಷ ಗುಡಿಸಾಗರ, ಮಹೇಶ ಜಡಿ, ವಿನಾಯಕ ಕುಲಕರ್ಣಿ, ಗಜಾನನ ರಾಶಿನಕರ ಹಾಗೂ ಇತರರು ಇದ್ದರು.

ಪ್ರತಿಭಟನಾ ಮೆರವಣಿಗೆ: ಶಿಂಪಿಗಲ್ಲಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಂದಾಯ ಕಚೇರಿಗೆ ಆಗಮಿಸಿತು. ಮೆರವಣಿಗೆ ಸರ್ಕಾರದ ವಿರುದ್ಧ ಹಾಗೂ ಜಿಲ್ಲೆಯ ಸರ್ವ ವಿಧಾನಸಭಾ ಶಾಸಕರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಂದಾಯ ಕಚೇರಿ ಎದುರಲ್ಲಿ ಆಗಮಿಸಿ ಭಜನೆ ಕೈಗೊಂಡು ಸರ್ಕಾರ ವಿರುದ್ಧ ಭಜನಾ ಪದಕಟ್ಟಿ ಹಾಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾದರು. ತಕ್ಷಣ, ರವಿಕುಮಾರ ಕೊರವರ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಮುಂದಾದರು. ಆದರೆ, ಪ್ರತಿಭಟನಾಕಾರರು ಸುಮಾರು ಒಂದು ಗಂಟೆ ಭಜನಾಪದಗಳ ಮೂಲಕ ಸರ್ಕಾರವನ್ನು ಹಿಯಾಳಿಸಿ, ನಂತರ ಮನವಿ ಸಲ್ಲಿಸಿ ಮುಂದಿನ ಒಂದು ವಾರ ಕಾಲ ಗಡವು ನೀಡಿ ಪ್ರತಿಭಟನೆಯನ್ನು ಹಿಂದೆ ಪಡೆದರು.