ಧರ್ಮಸ್ಥಳದಲ್ಲಿ ಭಜನಾ ಕಮ್ಮಟ: ಉಡುಪಿಯಲ್ಲಿ ಸಮಾಲೋಚನಾ ಸಭೆ

| Published : May 29 2024, 12:48 AM IST

ಧರ್ಮಸ್ಥಳದಲ್ಲಿ ಭಜನಾ ಕಮ್ಮಟ: ಉಡುಪಿಯಲ್ಲಿ ಸಮಾಲೋಚನಾ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಜಿಲ್ಲಾ ಕಚೇರಿಯಲ್ಲಿ ಉಡುಪಿ ತಾಲೂಕು ಭಜನಾ ಪರಿಷತ್ ಸಮಾಲೋಚನಾ ಸಭೆ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ, ಭಜನಾ ತರಬೇತಿ, ಭಜನಾ ಮಂದಿರಗಳಿಗೆ ಸಹಾಯ ಹಸ್ತದ ಜೊತೆಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯಕ್ರಮಗಳು ಭಜನಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾದ ಉಡುಪಿ ತಾಲೂಕು ಭಜನಾ ಪರಿಷತ್ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತಾಡಿದರು.

ಶ್ರೀ ಕೃಷ್ಣನ ನೆಲೆವೀಡು ಉಡುಪಿ ಹಾಗೂ ತಾಲೂಕಿನಾದ್ಯಂತ ಪಸರಿಸಿರುವ ಗರಿಷ್ಠ ಭಜನಾ ಮಂಡಳಿಗಳನ್ನು ಒಗ್ಗೂಡಿಸಿ ಉಡುಪಿ ತಾಲೂಕು ಭಜನಾ ಪರಿಷತ್ತಿನಲ್ಲಿ ನೋಂದಣಿಗೊಳಿಸುವ ಜೊತೆಗೆ ವಿನೂತನ ಕಾರ್ಯಕ್ರಮಗಳ ಮೂಲಕ ಭಜನಾ ಪರಿಷತ್ತನ್ನು ಸದೃಢವಾಗಿ ಬೆಳೆಸುವಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆ ವಹಿಸಿದ್ದರು. ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ವೇದಿಕೆಯಲ್ಲಿದ್ದರು.

ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್ ಸ್ವಾಗತಿಸಿದರು. ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರೇಮ ಕಾರ್ಯಕ್ರಮ ನಿರೂಪಿಸಿ, ಉಪ್ಪೂರು ವಲಯ ಮೇಲ್ವಿಚಾರಕ ಮನೀಶ್ ವಂದಿಸಿದರು.