ಸಾರಾಂಶ
ಬ್ಯಾಡಗಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಜಾನಪದ ಕಲಾಪ್ರಕಾರಗಳಿವೆ. ಅದರಲ್ಲಿ ಭಜನೆ ಭಗವಂತನ ಸಾಕ್ಷಾತ್ಕಾರ ಪಡೆಯಲು ಪ್ರಮುಖ ರಹದಾರಿಯಾಗಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.
ತಾಲೂಕಿನ ಕಲಾವಿದರ ತವರೂರು ಎಂಬ ಖ್ಯಾತಿ ಪಡೆದಿರುವ ಬೆಳಕೇರಿ ಗ್ರಾಮದ ಶ್ರೀದೇವಿ ಭಜನಾ ಸಂಘದ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ನಡೆ- ನುಡಿ ಮತ್ತು ಧರ್ಮಜಾಗೃತಿ ಸಂದೇಶ ನೀಡುವ ಭಜನಾ ಪದ್ಯಗಳು ನಾಡಿನ ಸಂಸ್ಕೃತಿಯ ಪ್ರತೀಕಗಳಾಗಿವೆ. ಪದ್ಯಗಳ ಮೂಲಕ ವಾಸ್ತವಿಕ ನಿಜಜೀವನದ ಬದುಕಿನ ಅರ್ಥವನ್ನು ಕಾವ್ಯಗಾನದ ಮೂಲಕ ತಿಳಿಸಿಕೊಡುವ ಭಜನಾ ಕಲಾವಿದರು ಗ್ರಾಮೀಣ ಸಂಸ್ಕೃತಿಯ ನಿಜ ಹರಿಕಾರರಾಗಿದ್ದಾರೆ ಎಂದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಭಕ್ತಿಸೇವೆ ಹಾಗೂ ಭಜನಾ ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಜನಾ ಸಂಘವು ರಾಜ್ಯದಲ್ಲಿಯೇ ಮಾದರಿಯಾಗಿದೆ. ಈ ಕಲೆ ನಶಿಸದಂತೆ ಶಾಶ್ವತವಾಗಿ ಉಳಿಸಿ ಬೆಳೆಸಬೇಕಾದ ಅಗತ್ಯವಿದ್ದು, ಗ್ರಾಮಾಂತರ ಭಜನಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಆಧುನಿಕತೆ ಭರಾಟೆಯಲ್ಲಿ ನಮ್ಮ ನಿಜವಾದ ಸಂಸ್ಕೃತಿ, ಸಂಪ್ರದಾಯ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಪರಂಪರಾಗತ, ಭಜನೆ ಕಲಾವಿದರು ಕ್ಷೇತ್ರದಲ್ಲಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ ಎಂದರು.ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಭಾರತೀಯತೆ ಮತ್ತು ಸಂಸ್ಕಾರ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಭಜನಾ ಕಲಾವಿದರು ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಕಾರ್ಯ ಪ್ರಶಂಸನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀದೇವಿ ಭಜನಾ ಸಂಘದ ಅಧ್ಯಕ್ಷ ರುದ್ರಗೌಡ ನೀಲನಗೌಡ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರಾಚಯ್ಯ ಹಿರೇಮಠ ಪ್ರಾಚಾರ್ಯ ಡಾ. ರಮೇಶ ತೆವರಿ ಮತ್ತು ಜಾನಪದ ವಿದ್ವಾಂಸ ಡಾ. ಕೆ.ಸಿ. ನಾಗರಜ್ಜಿ ಗ್ರಾಪಂ ಅಧ್ಯಕ್ಷ ಚಿನ್ನಪ್ಪ ಹೊಸ್ಮನಿ, ಉಪಾಧ್ಯಕ್ಷೆ ಆಶಾ ಕೆರೂಡಿ, ರಂಗಚೇತನ ಅಧ್ಯಕ್ಷ ಗಣೇಶ ಗುಡಿಗುಡಿ, ವರ್ತಕ ನಾಗನಗೌಡ ಮುದ್ದೆಪ್ಪಗೌಡ್ರ, ಫಕ್ಕೀರಗೌಡ ಗೌಡ್ರ, ಕರಬಸಪ್ಪ ಇಟಗಿ, ನಾಗಪ್ಪ ತೆವರಿ ಇತರರಿದ್ದರು.