ಸಾರಾಂಶ
ಧರ್ಮಸ್ಥಳದಲ್ಲಿ ೨೭ನೇ ವರ್ಷದ ಭಜನಾ ಕಮ್ಮಟ ಸಮಾರೋಪಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭಜನೆ ಮೂಲಕ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಸಾಧಿಸಬಹುದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.ಭಾನುವಾರ ಧರ್ಮಸ್ಥಳದಲ್ಲಿ ೨೭ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಜನೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ. ಭಜನಾ ಕಮ್ಮಟದಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿ ಅನಾವರಣವಾಗಿ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ದೃಢಭಕ್ತಿಯಿಂದ ಭಜನೆ ಮಾಡಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು. ಇಂದು ‘ಆನ್‌ಲೈನ್‘ ಚಿಂತೆ-ಚಿಂತನದಿಂದ ‘ಲೈಫ್‌ಲೈನ್’ ಹಾಳಾಗುತ್ತಿದೆ ಎಂದು ಅವರು ವಿಷಾದಿಸಿದರು.ರಾಮಾಯಣ, ಮಹಾಭಾರತದ ಕಥೆಗಳಿಂದ ನಮ್ಮ ಸಾರ್ಥಕ ಬದುಕಿಗೆ ಮಾರ್ಗದರ್ಶನ ಸಿಗುತ್ತಿದೆ. ಭಜನಾ ಕಮ್ಮಟದ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ. ಸನಾತನ ಧರ್ಮದ ಪುನರುತ್ಥಾನದ ಕಾರ್ಯ ಕ್ಷೇತ್ರದಿಂದ ಆಗುತ್ತಿದೆ. ಭಜನೆಯಿಂದ ಸಾತ್ವಿಕತೆಯ, ಪ್ರೀತಿಯ ಶಕ್ತಿ ಬೆಳಯುತ್ತದೆ. ಭಜನೆಯೂ ಒಂದು ರಾಷ್ಟೋತ್ಥಾನದ ಕಾರ್ಯವೇ ಆಗಿದೆ ಎಂದು ಸ್ವಾಮೀಜಿ ಅಭಿನಂದಿಸಿದರು.ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನದೊಂದಿಗೆ ಏಕತೆ ಮತ್ತು ಏಕಾಗ್ರತೆ ಸಾಧಿಸಲು ಭಜನೆ ಪ್ರೇರಕ ಶಕ್ತಿಯಾಗಿದೆ ಎಂದರು.ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಶುಭಾಶಂಸನೆ ಮಾಡಿದರು.ಅಧ್ಯಕ್ಷತೆ ವಹಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಕೂಡಾ ಭಜನೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಭಜನಾಪಟುಗಳು ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕುಂದಾಪುರದ ಕೃಷ್ಣ ಪೂಜಾರಿ ಮತ್ತು ನೆಲ್ಯಾಡಿಯ ಭವಿಷ್ಯ ಕಮ್ಮಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಮಿ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಉಪಾಧ್ಯಕ್ಷ ರಾಜೇಂದ್ರ ಬಸ್ರೂರು, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್ ಇದ್ದರು.ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರಪಡಿಸಿದರು.ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಚಂದ್ರಶೇಖರ ಸಾಲ್ಯಾನ್ ವಂದಿಸಿದರು. ಶ್ರೀನಿವಾಸ ರಾವ್ ನಿರ್ವಹಿಸಿದರು.ವಿದುಷಿ ಚೈತ್ರಾ ನಿರ್ದೇಶನದಲ್ಲಿ ದೃಶ್ಯ ರೂಪಕ ಪ್ರಸ್ತುತಿಗೊಂಡಿತು. ಈ ಬಾರಿ ನೃತ್ಯ ಭಜನಾ ಪ್ರಾತ್ಯಕ್ಷಿಕೆಯನ್ನು ವಿಶಿಷ್ಟ ರೀತಿಯಲ್ಲಿ ಅಳವಡಿಸಲಾಗಿದ್ದು ಅದು ವಿಶೇಷ ಗಮನ ಸೆಳೆಯಿತು.
....................ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಆನೆಗಳೊಂದಿಗೆ ಭಜನೋತ್ಸವದ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕೊಂಬು, ಕಹಳೆ, ನಾದಸ್ವರ, ಬೇಂಡ್ ವಾದ್ಯಗಳೊಂದಿಗೆ, ಕುಣಿತ ಭಜನೆಯೊಂದಿಗೆ ನೆರವೇರಿತು. ಒಡಿಯೂರು ಶ್ರೀಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು...........
ಇಲ್ಲಿನ ಧರ್ಮ, ಸಂಸ್ಕೃತಿಯ ಅನಾವರಣವಾಗಿದೆ. ಕುಣಿತ ಭಜನೆಯಿಂದಾಗಿ ಬ್ರೇಕ್ ಡ್ಯಾನ್ಸ್ ಗಳಿಗೆ ಬ್ರೇಕ್ ಬಿದ್ದಿದೆ. ಸಂಸ್ಕಾರದ ಮೂಲಕ ಬದುಕು ಕಟ್ಟುವುದು ಹೇಗೆಂಬುದನ್ನು ಭಜನಾ ಕಮ್ಮಟ ತೋರಿಸಿಕೊಡುತ್ತದೆ. ರಾಮ ಅಂದರೆ ರಾಷ್ಟ್ರ, ರಾಷ್ಟ್ರ ಅಂದರೆ ರಾಮ. ಭಜನಾ ಸೈನಿಕರು ಹೆಚ್ಚಾಗಲಿ.-ಶ್ರೀ ಗುರುದೇವಾನಂದ ಸ್ವಾಮೀಜಿ, ಒಡಿಯೂರು ಶ್ರೀಗಳು.