ಸಾರಾಂಶ
ವೀಕೆಂಡ್ ಹಿನ್ನೆಲೆ ಶನಿವಾರವಾದ ಇಂದು ಸಹಾ ಇಶಾ ಯೋಗ ಕೇಂದ್ರದಲ್ಲಿ ಸ್ಥಾಪಿಸಿರುವ ಆದಿಯೋಗಿ ಪ್ರತಿಮೆ ವೀಕ್ಷಿಸಲು ಭಕ್ತರ ದಂಡು ಹರಿದು ಬಂದಿತ್ತು. ಬಸ್, ಕಾರು ಹಾಗೂ ಬೈಕ್ಗಳ ಮೂಲಕ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಹಾ ಶಿವರಾತ್ರಿ ಜಾಗರಣೆ ಮತ್ತು ಮಾರನೇದಿನವಾದ ಶನಿವಾರ ತಾಲೂಕಿನ ಅಗಲಗುರ್ಕಿ ಸಮೀಪದ ಇಶಾ ಕೇಂದ್ರದ ಆದಿಯೋಗಿ ದರ್ಶನ ಪಡೆಯಲು ಲಕ್ಷಾಂತರ ಜನರು ಆಗಮಿಸಿದ್ದರು.ಯೋಗ ಲಿಂಗೇಶ್ವರ ದೇವರಿಗೆ ದೀಪ ಬೆಳಗಿಸುವ ಮತ್ತು ಜಲಾಭಿಷೇಕ ಮಾಡಲು ಭಕ್ತಾಧಿಕಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇಶಾ ಕೇಂದ್ರಕ್ಕೆ ತಲುಪಲು ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಜಾಗರಣೆ ಪ್ರಯುಕ್ತ ಶುಕ್ರವಾರ ರಾತ್ರಿ ಕೊಯಮತ್ತೂರಿನ ಇಶಾ ಯೋಗಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಆಚರಣೆಯು ನೇರ ಪ್ರಸಾರವನ್ನು ರಾತ್ರಿ ಸೇರಿದ್ದ ಭಕ್ತರು ಕಣ್ತುಂಬಿಕೊಂಡರು. ರಾಸುಗಳ ಪ್ರದರ್ಶನವೂ ಇತ್ತು. ಅಪಾರ ಸಂಖ್ಯೆಯಲ್ಲಿ ಬಂದ ಜನರು ವಿವಿಧ ತಳಿಗಳ ರಾಸುಗಳನ್ನು ಕಣ್ತುಂಬಿಕೊಂಡರು.ಬಿಎಂಟಿಸಿ 100 ಬಸ್ ವ್ಯವಸ್ಥೆ
ಬಿಎಂಟಿಸಿಯು ಬೆಂಗಳೂರಿನಿಂದ ನಂದಿ, ರಂಗಸ್ಥಳ ಮತ್ತು ಈಶಾ ಯೋಗ ಕೇಂದ್ರಕ್ಕೆ ವಿಶೇಷ ಪ್ರವಾಸದ ಪ್ಯಾಕೇಜ್ ನೀಡಿತ್ತು. 100 ಬಿಎಂಟಿಸಿ ಬಸ್‌ಗಳು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ನಡುವೆ ಸಂಚರಿಸಿದವು. ರಾತ್ರಿಯ ನಡೆದ ಕಾರ್ಯಕ್ರಮಗಳನ್ನು ನೋಡಲು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಯ ಭಕ್ತರು ಯೋಗ ಕೇಂದ್ರಕ್ಕೆ ಬಂದರು.ವೀಕೆಂಡ್ ಹಿನ್ನೆಲೆ ಶನಿವಾರವಾದ ಇಂದು ಸಹಾ ಇಶಾ ಯೋಗ ಕೇಂದ್ರದಲ್ಲಿ ಸ್ಥಾಪಿಸಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ವೀಕ್ಷಿಸಲು ಭಕ್ತರ ದಂಡು ಹರಿದು ಬಂದಿತ್ತು. ಕೆಎಸ್ ಆರ್ ಟಿಸಿ, ಬಿಎಂಟಿಸಿ, ಖಾಸಗಿ ಬಸ್, ಕಾರು ಹಾಗೂ ಬೈಕ್ಗಳ ಮೂಲಕ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು.ಮಹಿಳಾ ಪ್ರವಾಸಿಗರೇ ಹೆಚ್ಚು
ಉಚಿತ ಪ್ರಯಾಣ ಮತ್ತು ನಂದಿ ಜಾತ್ರೆ ಹಿನ್ನೆಲೆ ಕೆಎಸ್ ಆರ್ ಟಿಸಿ ಬಸ್ಗಳನ್ನು ಚಿಕ್ಕಬಳ್ಳಾಪುರದಿಂದ ನಂದಿ, ನಂದಿಯಿಂದ ಚಿಕ್ಕಬಳ್ಳಾಪುರ ಮತ್ತು ಇಶಾ ಯೋಗ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿದ್ದರು. ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣದ ಹಿನ್ನಲೆ ಕೆಎಸ್ ಆರ್ ಟಿಸಿ ಬಸ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ವಾಹನಗಳ ದಟ್ಟಣೆಯಿಂದ ಇಶಾ ಕೇಂದ್ರಕ್ಕೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಶಾ ಕೇಂದ್ರಕ್ಕೆ ಹೆಚ್ಚಿನ ಜನ ಬಂದ ಹಿನ್ನಲೆ ಜನಸಂದಣಿ ನಿಭಾಯಿಸಲು ಸ್ವಯಂ ಸೇವಕರು ಹರಸಾಹಸ ಪಡಬೇಕಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.