ಸಾರಾಂಶ
ಶಿವರಾತ್ರಿ ಪ್ರಯುಕ್ತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಮಾ. 8ರಂದು ಇಡೀರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಕಾರ್ಯಕ್ರಮ ವೀಕ್ಷಿಸಿದರು.
ಹೊಸಪೇಟೆ: ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ವತಿಯಿಂದ ಮಹಾ ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ರಾತ್ರಿ ಇಡೀ 26ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮ ವೀಕ್ಷಿಸಿದರು.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಭಕ್ತ ಸಮೂಹ ಸೇರುವುದರಿಂದಲೇ ಅದನ್ನು ದೇವಾಲಯ ಎನ್ನುವುದು. ಭಕ್ತರು ದೇವರಿಗೆ ವಿವಿಧ ಮಾದರಿಯಲ್ಲಿ ಸೇವೆ ಸಲ್ಲಿಸುತ್ತಾರೆ. ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು. ಸ್ಥಳೀಯ ಕಲಾವಿದರ ಕೋರಿಕೆಯ ಮೇರೆಗೆ ಪ್ರತಿ ತಿಂಗಳು ಅಮಾವಾಸ್ಯೆಯಂದು ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂಪಿ ಗ್ರಾಪಂ ಅಧ್ಯಕ್ಷೆ ರಜಿನಿ ಕೆ. ಷಣ್ಮುಖಗೌಡ ಅಧ್ಯಕ್ಷತೆ ವಹಿಸಿದ್ದರು. ಕಂಪ್ಲಿಯ ಹೇಮಯ್ಯ ಸ್ವಾಮಿ, ದೇವಸ್ಥಾನದ ಇಒ ಹನುಮಂತಪ್ಪ ಹಾಗೂ ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಮುಖಂಡರಾದ ಕೆ. ಪಂಪನಗೌಡ, ಎ. ದೊಡ್ಡಬಸಪ್ಪ, ಕೆ. ತೋಟಪ್ಪ ಇತರರು ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀರಕ್ಷಾ, ದೀಕ್ಷಾ ಭಕ್ತಿ ಗೀತೆ ಹಾಡಿದರು. ಪಾಂಡುರಂಗ ಅಮೀದಾಲ್ ಮಲ್ಲಿಕಾರ್ಜುನ ತುರುವನೂರು, ಡಾ. ತಿಮ್ಮಣ್ಣ ಭೀಮರಾಯ, ಸುಮಾ ಕಾಳಘಟ್ಟ ಅವರಿಂದ ಪ್ರವಚನ ನೆರವೇರಿತು. ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾಕೇಂದ್ರದವರಿಂದ ಸಮೂಹ ನೃತ್ಯ, ಹರ್ಷಿತಾ ಹೊಸಪೇಟೆ ಭರತನಾಟ್ಯ, ಶ್ರೇಯಾ ಹೈದರಾಬಾದ್ ಕುಚುಪುಡಿ ನೃತ್ಯ ಪ್ರದರ್ಶಿಸಿದರು. ಹೊಸಪೇಟೆಯ ಯಲ್ಲಪ್ಪ ಭಂಡಾರ್‌ದಾರ್ ಅವರಿಂದ ಜಾನಪದ ಗಾಯನ ನಡೆಯಿತು. ಮಲ್ಲಿಕಾರ್ಜುನ ಬಡಿಗೇರ್ ಅವರಿಂದ ತಬಲಾ ಸೋಲೋ, ಸಮರ್ಥ ಅಂಗಡಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ವಾಮದೇವ ಹಾರ್ಮೋನಿಯಮ್, ಹನುಮಂತಪ್ಪ ಕಾರಿಗನೂರು, ಯೋಗೀಶ್ ಎಂ. ಹೊಸಪೇಟೆ ತಬಲಾ ಸಾಥ್ ನೀಡಿದರು. ಬೆಳಗಿನ ಜಾವ ನಾಲ್ಕು ಗಂಟೆ ವರೆಗೆ ಕಾರ್ಯಕ್ರಮ ಜರುಗಿತು.