ಸಿದ್ಧಾರೂಢ ರಥೋತ್ಸವಕ್ಕೆ ಐದಾರು ಲಕ್ಷ ಭಕ್ತರು!

| Published : Mar 10 2024, 01:31 AM IST

ಸಾರಾಂಶ

ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢರ ಮಹಾರಥೋತ್ಸವವು ಶನಿವಾರ ಸಡಗರ, ಸಂಭ್ರಮ, ಸಹಸ್ರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಉತ್ತರ ಕರ್ನಾಟಕದ ಆರಾಧ್ಯ ದೈವ ಸಿದ್ಧಾರೂಢರ ಮಹಾರಥೋತ್ಸವವು ಶನಿವಾರ ಸಡಗರ, ಸಂಭ್ರಮ, ಸಹಸ್ರಾರು ಭಕ್ತರ ಉದ್ಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಸಿದ್ಧಾರೂಢ ಮಹಾರಾಜ ಕಿ ಜೈ, ಜೈ ಜೈ ಸಿದ್ಧಾರೂಢ, ಹುಬ್ಬಳ್ಳಿ ಎಂಬುದು ಕಲ್ಯಾಣ; ಸಿದ್ಧಾರೂಢ ಬಸವಣ್ಣ..! ಸೇರಿದಂತೆ ಹಲವು ಜಯಘೋಷಗಳು ಭಕ್ತರಿಂದ ಮೊಳಗಿದವು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು. 5- 6 ಲಕ್ಷಕ್ಕೂ ಅಧಿಕ ಜನಸ್ತೋಮ ಜಮೆಯಾಗಿತ್ತು. ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕದ ಕಲಬುರಗಿ, ಬೀದರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಸಂಜೆ ಮಠದ ಆವರಣದಲ್ಲಿ ಸಿದ್ಧಾರೂಢ ಸ್ವಾಮೀಜಿಗಳ ರಥೋತ್ಸವಕ್ಕೆ ಮಠದ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಜಿ.ಶಾಂತಿ ಚಾಲನೆ ನೀಡಿದರು. ಬಳಿಕ, ತೇರಿಗೆ ಮೇಲಿಂದ ಪುಷ್ಪಾರ್ಚನೆ ಮಾಡಲಾಯಿತು. ಜಗ್ಗಲಗಿ ಮೇಳ, ಕರಡಿಮಜಲು, ಡೊಳ್ಳು ಕುಣಿತ ಸೇರಿ ಭಜನಾ ತಂಡಗಳು ರಥದ ಮುಂದೆ ಮುಂದೆ ಸಾಗಿದವು. ಇವುಗಳೊಟ್ಟಿಗೆ ಜನ ನೃತ್ಯದ ಮೂಲಕ ಭಕ್ತಿ ತೋರಿಸಿದರು.