ಸಾರಾಂಶ
ಹಲಗೂರಿನಿಂದ ಮುತ್ತತ್ತಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುವುದನ್ನು ಮನಗಂಡು ಉತ್ತಮವಾದ ರಸ್ತೆ ನಿರ್ಮಾಣ ಮಾಡಿರುವುದರಿಂದ ಇದುವರೆಗೂ ಯಾವುದೇ ಅಪಘಾತಗಳು ಸಂಭವಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಹಲಗೂರು
ಮುತ್ತತ್ತಿ ಪ್ರದೇಶ ವ್ಯಾಪ್ತಿಯಲ್ಲಿರುವ ಜನರಿಗೆ ಅರಣ್ಯ ಪ್ರದೇಶದ ಸಂರಕ್ಷಣೆ ಜೊತೆಗೆ ಇಲ್ಲಿನ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ತಾಳವಾಡಿ ದೇವಸ್ಥಾನದ ಬಳಿಯ ಬಂಜರ ಭವನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಹಕ್ಕುಗಳ ಸಮಿತಿ ವತಿಯಿಂದ ಲಂಬಾಣಿ, ಹೊಸದೊಡ್ಡಿ ಮತ್ತು ಸೋಲಭ ಗ್ರಾಮಗಳಲ್ಲಿ ಪಾರಂಪರಿಕವಾಗಿ ವಾಸ ಮಾಡುತ್ತಿರುವ 78 ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ಕಾಡಿನಲ್ಲಿರುವ ಮರಗಳನ್ನು ಕಡಿಯುವುದರಿಂದ ನಮ್ಮ ಸಂಪತ್ತು ನಾಶವಾಗಲಿದೆ. ನಿಮ್ಮ ಭವಿಷ್ಯವೂ ಸಹ ಹಾಳಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾಡಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.ಹಲಗೂರಿನಿಂದ ಮುತ್ತತ್ತಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುವುದನ್ನು ಮನಗಂಡು ಉತ್ತಮವಾದ ರಸ್ತೆ ನಿರ್ಮಾಣ ಮಾಡಿರುವುದರಿಂದ ಇದುವರೆಗೂ ಯಾವುದೇ ಅಪಘಾತಗಳು ಸಂಭವಿಸುತ್ತಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಮಾಜಿ ಆಪ್ತ ಕಾರ್ಯದರ್ಶಿ ವೀರನಾಯಕ್ ಮಾತನಾಡಿ, ನಮ್ಮ ಸಮುದಾಯದವರು ಈ ಭಾಗದಲ್ಲಿ ಇದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಭಾಗದಲ್ಲಿ ಮೂರು ತಾಂಡಗಳು ಇವೆ ಎಂಬುದನ್ನು ತಿಳಿದು ಮುಖ್ಯಮಂತ್ರಿಗಳಿಗೆ ಒತ್ತಡ ತಂದು, ನರೇಂದ್ರಸ್ವಾಮಿ ಅವರ ಹೆಚ್ಚಿನ ಶ್ರಮದಿಂದ ಹಕ್ಕುಪತ್ರ ದೊರೆತಿದೆ ಎಂದು ಹೇಳಿದರು.ಸ್ಥಳೀಯ ಮುಖಂಡ ರಾಮಲಿಂಗ ನಾಯಕ್ ಮಾತನಾಡಿ, ಕಾಡಂಚಿನಲ್ಲಿ ವಾಸ ಮಾಡುವ ನಮಗೆ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ನಾವು ಬೆಳೆದ ಫಸಲುಗಳನ್ನು ಕಾಡಾನೆಗಳು ತಿಂದು ನಾಶಪಡಿಸುತ್ತಿವೆ. ವ್ಯವಸಾಯ ಮಾಡುವ ಜಮೀನಿಗೆ ಹಕ್ಕು ಪತ್ರ ಕೊಡಿಸಿದರೆ ನಾವು ಪರಿಹಾರ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಲೋಕೇಶ್, ತಾಪಂ ಇಒ ಮಮತಾ, ಮತ್ತು ಅರಣ್ಯ ಇಲಾಖೆ ಅಧಿಕಾರಿ ರವಿ ಬುರ್ಜಿ ಮತ್ತು ಸಿಬ್ಬಂದಿಯಾದ ಪ್ರವೀಣ್ ಕುಮಾರ್,ನಂದೀಶ್, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಲರಾಜು, ದೇವರಾಜು, ಚಂದ್ರಕುಮಾರ, ಬಸವರಾಜು, ಎಚ್.ಕೆ.ತೇಜ್ ಕುಮಾರ್, ಶ್ಯಾಮ್, ಮರಿಸ್ವಾಮಿ, ಕೆಂಪಯ್ಯ, ಎಚ್.ವಿ.ರಾಜು, ಕೆಂಪಯ್ಯ ದೊಡ್ಡಿ ಮೋಹನ್ ಕುಮಾರ್ ಸೇರಿ ಇತರರು ಇದ್ದರು.