ಸಾರಾಂಶ
ಹಾವೇರಿ: ಭಕ್ತಿಯನ್ನು ಜ್ಞಾನೋಪಾಸನೆ, ಮನೋವಿಕಾಸ, ಸಾಮಾಜಿಕ ಪರಿಶುದ್ಧತೆಯ ಲೋಕಜ್ಞಾನದ ನೆಲೆಯಲ್ಲಿ ವಿವೇಚಿಸುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಸಾಂಸ್ಕೃತಿಕ ಚಲನಶೀಲತೆಗೆ ಭಕ್ತಿ ಪರಂಪರೆಯು ತನ್ನದೇಯಾದ ಅಮೂಲ್ಯ ಕೊಡುಗೆ ನೀಡುತ್ತದೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಭಕ್ತಿ ಪರಂಪರೆ ಮತ್ತು ಕರ್ನಾಟಕ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಕ್ತಿಯನ್ನು ಶ್ರದ್ಧೆ, ನಂಬಿಕೆ, ವಿಶ್ವಾಸ, ಪ್ರೀತಿ ಎಂದು ಹೇಳಲಾಗುತ್ತದೆ. ಮಧ್ಯಕಾಲೀನ ಕನ್ನಡ ಸಾಹಿತ್ಯದ ಸಮಯದಲ್ಲಿ ಸಾಮಾಜಿಕ ಸ್ಥಿತಿಗತಿಯ ಕಾಲದಲ್ಲಿ ಭಕ್ತಿಪಂಥ ಪ್ರಾರಂಭವಾಯಿತು. ಭಕ್ತಿ ಪಂಥದ ಸಂತರು ತಮ್ಮ ವಿಚಾರ ನಾನಾ ರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದರು.ಕೆಎಲ್ಇ ಸಂಸ್ಥೆಯ ಸ್ಥಾನಿಕ ಮಂಡಳಿ ಅಧ್ಯಕ್ಷ ಡಾ. ಎಸ್.ಎಲ್. ಬಾಲೆಹೊಸೂರ ಮಾತನಾಡಿ, ಭಕ್ತಿ ಎಂಬ ಪದವಿಲ್ಲದೇ ಒಬ್ಬ ವ್ಯಕ್ತಿ, ಸಮಾಜ ಎಂದೂ ಬದುಕುಳಿಯಲಾರದು. ಭಕ್ತಿ ನೆಲೆಗೊಂಡಾಗ ಮಾತ್ರ ವ್ಯಕ್ತಿಯ ವಿಕಸನದೊಂದಿಗೆ ಸಮಾಜದ ಪ್ರಗತಿಯು ಧನಾತ್ಮಕ ಚಿಂತನೆಯ ಮೂಲಕ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಕುಮಾರೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಯಣ್ಣನವರ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯಕ್ಕೆ ಕನಕದಾಸ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದು ಸರ್ಕಾರದಲ್ಲಿ ಬೇಡಿಕೆ ಇಡಬೇಕೆಂದು ವಿನಂತಿಸಿದರು.ಡಾ. ಎಸ್.ಪಿ. ಗೌಡರ್ ಮಾತನಾಡಿ, ಭಕ್ತಿ ಭಾವನ್ಮಾತಕ ಸಂಕೀರ್ಣವಾದ ವಿಷಯ. ಈ ಭಕ್ತಿ ಚಳವಳಿ ಎನ್ನುವುದು ಸರ್ವ ವ್ಯಾಪಕವಾಗಿದೆ. ಭಕ್ತಿ ಪಂಥದ ನಿಲುವುಗಳು ಭಿನ್ನ ಭಿನ್ನವಾದ ಹರವುಗಳನ್ನು ಒಳಗೊಂಡಿದೆ. ಇಡೀ ಭಕ್ತಿ ಪರಂಪರೆ ಅವಲೋಕಿಸಿದಾಗ ತಳಸಮುದಾಯದ ಪಾತ್ರ ಕಂಡುಬರುತ್ತದೆ ಎಂದರು.
ಕೆಎಲ್ಇ ಸಂಸ್ಥೆಯ ಸ್ಥಾನಿಕ ಮಂಡಳಿ ಸದಸ್ಯ ಬಸವರಾಜ ಮಾಸೂರು, ವಿವಿಧ ಗೋಷ್ಠಿ ವಿದ್ವಾಂಸರಾದ ಡಾ. ಗುರುಪಾದ ಮರಿಗುದ್ದಿ, ಶ್ರೀಧರ ಹೆಗಡೆ ಭದ್ರನ್, ಡಾ. ತಮಿಳ್ ಸೆಲ್ವಿ, ಡಾ. ಗೀತಾ ವಸಂತ, ಡಾ. ಕಾಂತೇಶ ಅಂಬಿಗೇರ, ಡಾ. ಗುಂಡೂರು ಪವನಕುಮಾರ, ಡಾ. ಭಾರತಿದೇವಿ ಶಿವಮೊಗ್ಗ, ಡಾ. ಶಿವರಾಮ ಶೆಟ್ಟಿ ಮಂಗಳೂರು ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರು, ವಿದ್ವಾಂಸರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂಘಟನಾ ಕಾರ್ಯದರ್ಶಿ ಡಾ. ಸಂಜೀವ ನಾಯಕ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ದೀಪಕ ಕೊಲ್ಹಾಪುರೆ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಸತೀಶ ಕುಲಕರ್ಣಿ, ಪ್ರೊ. ರಾಮರೆಡ್ಡಿ, ಪ್ರೊ. ನಾಗರಾಜ ಮುಚ್ಚಟಿ ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಪ್ರೊ. ಹೇಮಂತ ಸಿ.ಎನ್. ವಂದಿಸಿದರು. ಬಳಿಕ ಹಾವೇರಿ ಜಿಲ್ಲಾ ಕಲಾ ಬಳಗದ ಸತೀಶ ಕುಲಕರ್ಣಿ ತಂಡದವರಿಂದ ಭಕ್ತಿ ಎಂಬ ಬೀದಿನಾಟಕ ಪ್ರದರ್ಶನ ಮಾಡಿ ಸರ್ವಧರ್ಮದ ಸಮಾನತೆಯ ಸಂದೇಶ ಸಾರಿದರು.