19ರಿಂದ 3 ದಿನ ‘ಮಂಗಳೂರು ಲಿಟ್ ಫೆಸ್ಟ್-2024’

| Published : Jan 18 2024, 02:03 AM IST

ಸಾರಾಂಶ

ಜನವರಿ 19ರಿಂದ 21ರ ವರೆಗೆ ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ ನ್ಯಾಷನಲ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ಮಂಗಳೂರು ಲಿಟ್ ಫೆಸ್ಟ್‌-2024 ಆರನೇ ಆವೃತ್ತಿ ನಡೆಯಲಿದೆ. ಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವ ಹೊಂದಿದೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆ ಇವುಗಳಲ್ಲಿ 60ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಜನವರಿ 19ರಿಂದ 21ರ ವರೆಗೆ ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ ನ್ಯಾಷನಲ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ಮಂಗಳೂರು ಲಿಟ್ ಫೆಸ್ಟ್‌-2024 ಆರನೇ ಆವೃತ್ತಿ ನಡೆಯಲಿದೆ ಎಂದು ಭಾರತ್ ಫೌಂಡೇಷನ್‌ ಟ್ರಸ್ಟಿ ಸುನಿಲ್‌ ಕುಲಕರ್ಣಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವ ಹೊಂದಿದೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆ ಇವುಗಳಲ್ಲಿ 60ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ. ಈ ಬಾರಿಯ ಲಿಟ್‌ ಫೆಸ್ಟ್ ಗೌರವಕ್ಕೆ ಧಾರವಾಡ ವನಿತಾ ಸೇವಾ ಸಮಾಜ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಜ.19ರಂದು ಸಂಜೆ 5 ಗಂಟೆಗೆ ಲಿಟ್‌ ಫೆಸ್ಟ್‌ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಚಿಂತಕ ಲಕ್ಷ್ಮೀಶ ತೋಳ್ವಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ವಿನಯ್ ಹೆಗ್ಡೆ, ಮಿಥಿಕ್ ಸೊಸೈಟಿ ಕಾರ್ಯದರ್ಶಿ ರವಿ ಮತ್ತು ವನಿತಾ ಸೇವಾ ಸಮಾಜ ಧಾರವಾಡ ಇದರ ಕಾರ್ಯದರ್ಶಿ ಮಧುರಾ ಹೆಗಡೆ ಭಾಗಿಯಾಗಲಿದ್ದಾರೆ. ಈ ಸಂದರ್ಭ 13 ಲೇಖಕರು ಬರೆದ ‘ದಿ ಐಡಿಯಾ ಆಫ್‌ ಭಾರತ್‌’ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದರು.ಸಂಜೆ 5 ರಿಂದ ಹೆಸರಾಂತ ಭರತನಾಟ್ಯ ಕಲಾವಿದೆ ರಾಧೆ ಜಗ್ಗಿ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಜ.20ರಂದು

ಕಲಾವಿದ ಸಂದೀಪ್ ನಾರಾಯಣ್ ಕಾರ್ಯಕ್ರಮ ನಡೆಯಲಿದೆ ಎಂದರು.

ಲಿಟ್‌ ಫೆಸ್ಟ್‌ನಲ್ಲಿ ಸಿನಿಮಾ ಪ್ರದರ್ಶನ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಕಾರ್ಕಳದ ವಂದನಾ ರೈ ಅವರಿಂದ ಮಕ್ಕಳಿಗಾಗಿ ಚಿಣ್ಣರ ಅಂಗಳ ನಡೆಯಲಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಕ್ಲೇ ಮಾಡೆಲಿಂಗ್, ದೇಶೀ ಆಟಗಳು ಸೇರಿದಂತೆ ಲೇಖಕರು ಮತ್ತು ಪ್ರಮುಖರೊಂದಿಗೆ ಸಂವಾದ ಈ ಬಾರಿಯ ಲಿಟ್ ಫೆಸ್ಟ್‌ ವಿಶೇಷತೆಯಾಗಿದೆ. ಸಾಹಿತ್ಯ ಲೋಕದ ಮೂರು ಸಾಧಕರು, ಕುವೆಂಪು, ಬೇಂದ್ರೆ ಮತ್ತು ಪಂಜೆ ಮಂಗೇಶರಾಯರ ಕುರಿತು ವಿಶೇಷ ಅವಧಿಗಳು ಇರುತ್ತವೆ ಎಂದು ಟ್ರಸ್ಟಿ ಶ್ರೀರಾಜ್ ಗುಡಿ ಹೇಳಿದರು. ಸದಸ್ಯರಾದ ದುರ್ಗಾ ರಾಮದಾಸ್ ಕಟೀಲ್, ದಿಶಾ ಶೆಟ್ಟಿ, ಈಶ್ವರ್ ಶೆಟ್ಟಿ ಇದ್ದರು. ಈ ಬಾರಿಯ ಮೂರು ದಿನಗಳ ಲಿಟ್‌ ಫೆಸ್ಟ್‌ನಲ್ಲಿ ಪ್ರಸಿದ್ಧ ಸಾಹಿತಿಗಳು, ಸಿನಿಮಾ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪ್ರಕಾಶ್‌ ಬೆಳವಾಡಿ, ಲೆ.ಜನರಲ್‌ ವಿನೋದ್‌ ಖಂಡ್ರೆ, ಕ್ಯಾಪ್ಟನ್‌ ಸಜಿತಾ ನಾಯರ್‌, ಲೆ.ಕರ್ನಲ್‌ ಅಂಕಿತ ಶ್ರೀವಾತ್ಸವ್‌. ಕೋಶಲ್‌ ಮೆಹ್ರಾ, ಸುಧಾರಾಣಿ, ಜೋಗಿ, ಶ್ರೀಧರ ಬಳೆಗಾರ, ಎಂ.ಎಸ್‌.ಚೈತ್ರ, ಕ್ಷಮಾ ನರಗುಂದ, ಅರ್ಷಿಲಾ ಮಲಿಕ್‌, ಬೇಳೂರು ಸುದರ್ಶನ್‌, ಡಾ.ಗಾಯತ್ರಿ ನಾವಡ, ಡಾ.ರವೀಶ್ ಪಡುಮಲೆ, ಶಶಿರಾಜ್‌ ಕಾವೂರು ಮತ್ತಿತರರು ವಿಚಾರ ಮಂಡಿಸಲಿದ್ದಾರೆ.