ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ’ಭಾರತ್ ಜೋಡೋ’ ಯಾತ್ರೆಯ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕು, ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಆ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ‘ಭಾರತ್ ಜೋಡೋ -2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಪ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ’ಭಾರತ್ ಜೋಡೋ’ ಯಾತ್ರೆಯ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕು, ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಆ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ‘ಭಾರತ್ ಜೋಡೋ -2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಪ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಏಳು ಅಂಶಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿಯಿಂದ ಪಾದಯಾತ್ರೆ ನಡೆಸಿದ್ದರು. ಅವರ ಪಾದಯಾತ್ರೆಯು ಸೆ. ೩೦ ರಂದು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿ, ಸುಮಾರು ಒಂದು ವಾರ ರಾಜ್ಯದಲ್ಲಿ ಯಾತ್ರೆ ನಡೆದಿತ್ತು. ಅದರ ನೆನಪಿನಲ್ಲಿ ಸೆ.30ರಂದು ಶಿಕಾರಿಪುರದಿಂದ ಭಾರತ್ ಜೋಡೋ-2 ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಭಾರತ್ ಜೋಡೋ ಯಾತ್ರೆಯ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಯೋಚನೆ ಇತ್ತು. ಆದರೆ ಆ ಇಬ್ಬರು ನಾಯಕರು ಅಂದು ದೆಹಲಿಗೆ ತೆರಳುತ್ತಿರುವ ಕಾರಣಕ್ಕೆ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಸಚಿವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ತಿಳಿಸಿದರು.

ರಾಹುಲ್ ಗಾಂಧಿ ಅವರು ಸುಮಾರು ಐದು ತಿಂಗಳ ಕಾಲ 6 ಸಾವಿರ ಕಿಲೋಮೀಟರ್‌ಗಳ ಪಾದಯಾತ್ರೆ ನಡೆಸಿ, ದೇಶದ ವಿವಿಧ ವರ್ಗಗಳ ಜನರನ್ನು ನೇರವಾಗಿ ಭೇಟಿ ಮಾಡಿದ್ದರು. ಈ ಯಾತ್ರೆಯೂ ನಡೆದು ಇದೀಗ ನಾಲ್ಕು ವರ್ಷಗಳಾಗಿದ್ದು, ಅದರ ಆಶಯಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ನೇತೃತ್ವದೊಂದಿಗೆ 82 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಂದಿನ ಹಂತದ ಕಾರ್ಯಕ್ರಮದ ರೂಪರೇಷಗಳನ್ನು ಸಿದ್ದಪಡಿಸಲಿದ್ದಾರೆ ಎಂದರು.

ಹತ್ತು ಒಳ್ಳೆಯ ಕೆಲಸಗಳ ಮುಂದೆ ಒಂದುಕೆಟ್ಟ ಕೆಲಸ ಪ್ರಧಾನವಾಗಬಾರದು:

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಭಂಡಾರಿ ಅವರು, ನಿಜ, ಸುಂದರೇಶ್ ನನ್ನ ಕ್ಲಾಸ್ ಮೆಟ್. ಅವರ ಟೀಕೆಯ ವಿಚಾರ ವೈಯಕ್ತಿಕವಾದದ್ದು. ಇಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಹತ್ತಾರು ಒಳ್ಳೆಯ ಕೆಲಸ ಮಾಡಿದವರು ಕೆಲವೊಮ್ಮೆ ಒಂದು ಕೆಟ್ಟ ಕೆಲಸ ಮಾಡಿರುತ್ತಾರೆ. ಹಾಗಂತ ಅವರನ್ನು ಕೆಟ್ಟವರು ಎನ್ನಲಾಗದು. ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿದೆ. ಅವರು ಕೂಡ ಪಕ್ಷಕ್ಕೆ ದುಡಿದಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದನ್ನು ಪಕ್ಷ ನೋಡಿಕೊಳ್ಳಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಸಿ.ಯೋಗೇಶ್, ವಿಪ ಸದಸ್ಯೆ ಬಲ್ಕೀಶ್ ಬಾನು, ವಿಪ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಮೇಶ್ ಹಾಗೂ ಪಿ.ಓ. ಶಿವಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ಪಿ. ದಿನೇಶ್, ಜಿಲ್ಲಾ ಕಾಂಗ್ರೆಸ್ ಆಡಳಿತ ಉಸ್ತುವಾರಿ ಎಸ್.ಟಿ. ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಶಾ, ಎಸ್ಸಿ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಚಿನ್ನಪ್ಪ ಸೇರಿದಂತೆ ಇನ್ನಿತರರು ಇದ್ದರು.

ಇದುವರೆಗೂ ರಾಜಕಾರಣಕ್ಕಾಗಿ ಬಿಜೆಪಿ ಅನ್ಯಪಕ್ಷಗಳ ಶಾಸಕರನ್ನು ಹಾಗೂ ಸಚಿವರನ್ನು ಕಳ್ಳತನ ಮಾಡುತ್ತಿದ್ದರು. ಆದರೆ ಈಗ ಜನರ ಮತವನ್ನೇ ಕಳ್ಳತನ ಮಾಡಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಐಆರ್‌ ಸೋಗಿನಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಮತ ಹಾಕುವ ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದ ವರ್ಗಗಳ ಮತವನ್ನು ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಪೂರ್ವ ನಿಯೋಜಿತವಾಗಿ ಚುನಾವಣಾ ಆಯುಕ್ತರ ನೇಮಕದ ಕಾನೂನನ್ನು ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ದ್ರೋಹವೆಸಗಿದ್ದಾರೆ. ಆ ಮೂಲಕ ಒಂದು ಮತ ಮಾತ್ರ ವಿರೋಧ ಪಕ್ಷದವರೆಗೆ ಕೊಟ್ಟು ಉಳಿದ ಮತ ಆಡಳಿತದವರು ಇಟ್ಟುಕೊಂಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಏನೇ ಅಕ್ರಮ ಮಾಡಿದರು ಯಾವುದೇ ಕ್ರಮ ಕೈಗೊಳ್ಳಬಾರದು ಹಾಗೂ ಯಾವುದೇ ರೀತಿ ಶಿಕ್ಷೆಯಾಗಬಾರದೆಂಬ ನಿಯಮವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ಇದರಿಂದ ಜ್ಞಾನೇಶ್ ಕುಮಾರ್ ಮಾಡಿರುವ ಅಕ್ರಮವನ್ನು ಅವರ ಸಹದ್ಯೋಗಿಗಳೇ ಪ್ರಸ್ತಾಪಿಸಿದರು ಅವರ ವಿರುದ್ದ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಸುಮ್ಮನಿದ್ದಾರೆ. ಜ್ಞಾನೇಶ್ ಕುಮಾರ್ ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ಆ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ನಿಮಗೆ ಎಂಪಿ ಟಿಕೆಟ್ ಕೊಡುವುದಾಗಿದೆ ಬಿಜೆಪಿ ಹೇಳಿದೆ, ಇದರ ಅರ್ಥವೇನು?, ಅಂದರೆ ಬಿಜೆಪಿ ಅವರಿಗೆ ಪ್ರಜಾಪ್ರಭುತ್ವ ಬೇಡ್ವ? ಇದರ ವಿರುದ್ದ ದೇಶದಲ್ಲಿ ಕಾಂಗ್ರೆಸ್ ಕಾರ್ಯಕ್ರಮವನ್ನು ರೂಪಿಸಲಿದ್ದು, ಅವರು ರಾಜೀನಾಮೆ ಕೊಡುವವರೆಗೂ ಹೋರಾಟವನ್ನು ನಡೆಸಲಾಗುತ್ತದೆ ಎಂದರು.