ಸಾರಾಂಶ
ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಗದಗ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿರುವುದು ಮತ್ತು ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧಿಸುತ್ತಿರುವುದನ್ನು ಖಂಡಿಸಿ ಮಂಗಳವಾರ ಗದಗ ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದರು.ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ರಾಹುಲ್ ಗಾಂಧಿ ಅವರ ಯಾತ್ರೆ ಅಸ್ಸಾಂ ಪ್ರವೇಶಿಸುತ್ತಿದ್ದಂತೆ ನ್ಯಾಯ ಯಾತ್ರೆಗೆ ಅಡ್ಡಿ ಮಾಡಿದ್ದಾರೆ. ನ್ಯಾಯ ಯಾತ್ರೆಯಲ್ಲಿದ್ದ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.
ಬಿಜೆಪಿ ಕಾರ್ಯಕರ್ತರೇ ನ್ಯಾಯ ಯಾತ್ರೆಗೆ ಅಡ್ಡಿ ಮಾಡುತ್ತಿದ್ದಾರೆ. ಈ ರೀತಿಯ ಕುತಂತ್ರದ ಮೂಲಕ, ಒತ್ತಡ ಹಾಕಿ ಯಾತ್ರೆ ತಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಸಹಿಸುವುದಿಲ್ಲ, ನಾವು ಇದಕ್ಕಿಂತ ಉಗ್ರವಾದ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ರಾಹುಲ್ ಗಾಂಧಿ ಯಾತ್ರೆ ಅಸ್ಸಾಂ ತಲುಪಿದೆ, ಈ ಸಂದರ್ಭದಲ್ಲಿಯೇ ಬಿಜೆಪಿ ಧ್ವಜ ಹಿಡಿದು ಅನೇಕ ಕಾರ್ಯಕರ್ತರು ಪಾದಯಾತ್ರೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯವಾಗಿದೆ. ಪೊಲೀಸರು ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ. ಅಸ್ಸಾಂ ಪೊಲೀಸರು ಬಿಜೆಪಿ ಜತೆ ಸೇರಿ ಯಾತ್ರೆ ಬಂದ್ ಮಾಡಿಸಲು ಮುಂದಾಗಿದ್ದಾರೆ ಎಂದರು.
ಕಾಂಗ್ರೆಸ್ ಕಮಿಟಿ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ನಮ್ಮ ನಾಯಕನ ಪಾದಯಾತ್ರೆ ಸಹಿಸದೇ ಹಲ್ಲೆ ಮಾಡಿದ್ದಾರೆ. ಹಿಂದಿ ಭಾಷಿಕ ರಾಜ್ಯದಲ್ಲಿ ಯಾತ್ರೆಗೆ ತೊಂದರೆ ಕೊಡುವ ಸಾಧ್ಯತೆಗಳಿವೆ. ಹಾಗೇನಾದರೂ ನ್ಯಾಯ ಯಾತ್ರೆಗೆ ಅಡ್ಡಿ ಪಡಿಸಿದಲ್ಲಿ ನಮ್ಮ ಪಕ್ಷ ಇನ್ನಷ್ಟು ಉಗ್ರವಾದ ಹೋರಾಟ ನಡೆಸಲಿದೆ ಎಂದರು.ಧರಣಿಯಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ಲ, ರಾಮಣ್ಣ ಲಮಾಣಿ, ಡಿ.ಆರ್. ಪಾಟೀಲ, ವಾಸಣ್ಣ ಕುರುಡಗಿ, ಗುರಣ್ಣ ಬಳಗಾನೂರ, ಸುಜಾತಾ ದೊಡ್ಡಮನಿ, ಬಿ.ಬಿ. ಅಸೂಟಿ, ವಿದ್ಯಾಧರ ದೊಡ್ಡಮನಿ, ವೀರಯ್ಯ ಸೋಮನಕಟ್ಟಿಮಠ, ಅಶೋಕ ಮಂದಾಲಿ, ಮಹ್ಮದ ಶಾಲಗಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು, ಯುವ, ಮಹಿಳಾ ಘಟಕದ ಕಾರ್ಯಕರ್ತರು ಹಾಜರಿದ್ದರು.
ದಂಪತಿ ಪೂಜೆ ಸಲ್ಲಿಸಬೇಕು: ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ, ಹಿಂದೂ ಸಂಪ್ರದಾಯದಂತೆ ದೇವರ ಪ್ರತಿಷ್ಠಾಪನೆ ಮಾಡುವಾಗ ದಂಪತಿ ಸಮೇತ ಪೂಜೆ ಸಲ್ಲಿಸಬೇಕು. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವಿಷಯದಲ್ಲಿ ಪ್ರಧಾನಿ ಮೋದಿ ಶಿಷ್ಟಾಚಾರ ಮರೆತಿದ್ದಾರೆ. ಮೋದಿ ಎಂದರೆ ಸಾರ್ವಭೌಮ. ಒನ್ ಮ್ಯಾನ್ ಆರ್ಮಿ, ಅವರಿಗೆ ಮಂತ್ರಿಗಳು, ಪಕ್ಷದ ನಾಯಕರು ಬೇಕಾಗಿಲ್ಲ, ಎಲ್ಲ ಅವರೇ. ಒಂದು ಕಡೆ ಮದುವೆ ಮಾಡಿಕೊಂಡಿಲ್ಲ ಅಂತಾರೆ, ಅವರಿಗೆ ಕುಟುಂಬ ಇಲ್ಲವಾಗಿದ್ದರೆ ಬೇರೆ ದಂಪತಿಯನ್ನು ಕೂರಿಸಿ ಪೂಜೆ ಮಾಡಿಸಬೇಕಿತ್ತು. ಅದನ್ನೆಲ್ಲ ಬದಿಗಿಟ್ಟು ಸಂಪ್ರದಾಯ ಮುರಿದು ಆಚರಣೆ ಮಾಡಿದ್ದಾರೆ. ಸಂಪ್ರದಾಯ ಮುರಿದಾಗ ಕೆಟ್ಟ ಘಟನೆ ಎದುರಿಸಬೇಕಾಗುತ್ತದೆ ಎಂದರು.