ಕೊಪ್ಪ ಕಾಂಗ್ರೆಸ್‌ನಿಂದ ಭಾರತ ಐಕ್ಯತಾ ಪಾದಯಾತ್ರೆ

| Published : Feb 28 2024, 02:31 AM IST

ಸಾರಾಂಶ

ಕೊಪ್ಪ ತಾಲೂಕಿನ ಹರಂದೂರು ಪಂಚಾಯಿತಿಯಿಂದ ಹಿರೇಕೊಡಿಗೆ ಗ್ರಾ.ಪಂ.ವ್ಯಾಪ್ತಿಯವರೆಗೂ ಭಾರತ ಐಕ್ಯತಾ ಪಾದಯಾತ್ರೆ ನೆಡದು, ಶಾಸಕ ಟಿ.ಡಿ.ರಾಜೇಗೌಡ ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಕೊಪ್ಪ

ಬಿಜೆಪಿ ಹಾಗೂ ದೇಶದ ಪ್ರಧಾನಮಂತ್ರಿಯವರು ದ್ವೇಷದ ರಾಜಕಾರಣ ಮಾಡಿದರೆ ರಾಹುಲ್ ಗಾಂಧಿಯವರು ಪ್ರೀತಿಯ ರಾಜಕಾರಣ ಮಾಡೋಣಾ ಎಂದು ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಿ ಪ್ರೀತಿಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದರು. ಭಾನುವಾರ ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ ಯಾತ್ರೆಯ ಅಂಗವಾಗಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಯ ವತಿಯಿಂದ ಹರಂದೂರು ಪಂಚಾಯಿತಿ ವ್ಯಾಪ್ತಿಯಿಂದ ಹಿರೇಕೊಡಿಗೆ ಗ್ರಾ.ಪಂ. ವ್ಯಾಪ್ತಿಯವರೆಗೂ ನಡೆದ ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿಯವರು ಅನೇಕ ಅಡೆತಡೆಗಳನ್ನು ಉಂಟುಮಾಡಿದ್ದರು. ರಾಹುಲ್ ಗಾಂಧಿಯವರು ಪಾದಯಾತ್ರೆಯನ್ನು ನಡೆಸುವುದಿಲ್ಲ ಎಂದು ನಂಬಿದ್ದರು. ಆದರೆ ರಾಹುಲ್ ಗಾಂಧಿಯವರು ಎಲ್ಲಾ ಅಡೆ ತಡೆಯನ್ನು ದಾಟಿ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ ಎಂದ ಅವರು, ಬಿಜೆಪಿ ಮುಖಂಡರ ಮಕ್ಕಳು ಯಾರು ಬಜರಂಗದಳದ ಕಾರ್ಯಕರ್ತರಾಗಿಲ್ಲ. ಬಡ ಮಕ್ಕಳಿಗೆ ಶಾಲು ನೀಡಿ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ಡಿ.ಎನ್.ಜೀವರಾಜ್‌ರವರ ಮಕ್ಕಳು ಯಾರು ಬಜರಂಗದಳದ ಕಾರ್ಯಕರ್ತರಲ್ಲ ಎನ್ನುವ ಜನರಿಗೆ ಸತ್ಯ ಅರ್ಥವಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಬಡವ ಜನರಿಗಾಗಿ ಕುಟುಂಬಗಳಿಗೆ ೫ ಗ್ಯಾಂರಂಟಿಗಳ ಮೂಲಕ ಅನುಕೂಲ ಮಾಡಿಕೊಟ್ಟಿದೆ ಎಂದರು.

ಕೆ.ಆರ್.ಇ.ಡಿ.ಎಲ್. ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಮಾತನಾಡಿ, ರಾಹುಲ್ ಗಾಂಧಿಯವರು ೧೯೦ ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯನ್ನು ನಡೆಸಿ ರಾಜ್ಯದ ದೇಶದ ಸಮಸ್ಯೆಯನ್ನು ಆಲಿಸಿದ್ದಾರೆ. ಈಗ ಮುಂದುವರೆದ ಭಾಗವಾಗಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಜನಪ್ರಿಯ ಯೋಜನೆಗಳು ಹಾಗು ಜನರಿಗೆ ಅನುಕೂಲವಾಗುವ ಕೆಲಸ ಮಾಡಿದರೆ ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿಯವರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳನ್ನು ಯಾರು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಅವರ ವಿರುದ್ದ ಐಟಿ ದಾಳಿ, ಸಿಬಿಐ ದಾಳಿ ಮಾಡಿಸುತ್ತಿ ದ್ದಾರೆ. ಅವರ ವಿರುದ್ಧ ಯಾರೂ ಮಾತನಾಡದಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಪಂಚ ಗ್ಯಾರೆಂಟಿಗಳನ್ನು ಜಾರಿಗೆಗೊಳಿಸಿ ಅಭಿವೃದ್ಧಿ ಕೆಲಸ ಮಾಡುತ್ತಿದೆ ಎಂದರು.

ಕೆಪಿಸಿಸಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮುಂತಾದವರು ಮಾತನಾಡಿದರು.

ಹಿರಿಯ ಪತ್ರಕರ್ತ ವಿಶ್ವನಾಥ್ ಶೆಟ್ಟಿ, ಅನ್ನಪೂರ್ಣನರೇಶ್, ನವೀನ್ ಮಾವಿನಕಟ್ಟೆ, ಸೇರಿದಂತೆ, ತಾಲ್ಲೂಕು ಎಲ್ಲಾ ನಾಮ ನಿರ್ದೇಶನ ಸದಸ್ಯರು, ಮುಂಚೂಣಿ ಘಟಕಗಳ ಆದ್ಯಕ್ಷರು. ಸದಸ್ಯರುಗಳು, ಚುನಾಯಿತ ಪ್ರತಿನಿಧಿಗಳು, ಹೋಬಳಿ ಘಟಕಗಳ ಅಧ್ಯಕ್ಷರು. ಸದಸ್ಯರುಗಳು, ಪಂಚಾಯತ್ ಹಾಗೂ ಬೂತ್ ಮಟ್ಟದ ಅಧ್ಯಕ್ಷರು ಸದಸ್ಯರುಗಳು, ಹಿರಿಯ ಕಿರಿಯ ನಾಯಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.