ನಮ್ಮ ಭಾರತೀಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಮಹತ್ವದ ಸ್ಥಾನವಿದೆ. ಇದು ಈಶ್ವರನಿಂದ ಅನುಗ್ರಹಿತವಾಗಿದೆ, ಪಂಚಮವೇದವೆಂದು ಕರೆಯಲ್ಪಟ್ಟಿದೆ.

ಕೃಪಾ ಹೆಗಡೆ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಮ್ಮ ಭಾರತೀಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಮಹತ್ವದ ಸ್ಥಾನವಿದೆ. ಇದು ಈಶ್ವರನಿಂದ ಅನುಗ್ರಹಿತವಾಗಿದೆ, ಪಂಚಮವೇದವೆಂದು ಕರೆಯಲ್ಪಟ್ಟಿದೆ. ಅಂತಹ ಶ್ರೇಷ್ಟ ಕಲೆಯನ್ನು ಇಲ್ಲಿ ಆರಾಧನಾ ರೂಪದಲ್ಲಿ ನಡೆಸುತ್ತಿರುವುದು ಮಹತ್ ಕಾರ್ಯ ಆಗಿದೆ ಎಂದು ಹಿರಿಯ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಹೇಳಿದರು.

ಭಾರತೀಯ ನ್ರತ್ಯ ಕಲಾ ಕೇಂದ್ರದ ಮತ್ತು ಗಾಜಿನ ಮನೆ ಕುಟುಂಬದ ಹಾಗೂ ತೊಂಡೆಕೆರೆ ಕುಟುಂಬದ ಶ್ರೀಮತಿ ಕೃಪಾ ಹೆಗಡೆ ಭರತ ನಾಟ್ಯರಂಗ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಕಲೆಯ ಸಾಧನೆಗೆ ನಿರಂತರ ತಪಸ್ಸು ಬೇಕು. ಆ ನೆಲೆಯಲ್ಲಿ ಕೃಪಾಳಿಗೆ ಸ್ವತಃ ತಾಯಿಯೇ ಗುರುವಾಗಿ ದೊರೆತಿರುವುದು ವಿಶೇಷವಾದದ್ದು ಹದಿನಾಲ್ಕು ವರುಷಗಳ ಕಾಲ ನಿರಂತರ ಅಧ್ಯಯನ ಮಾಡಿದ ಕೃಪಾಳ ಭವಿಷ್ಯ ಉಜ್ವಲವಾಗಲಿ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಭರತ ಮುನಿಗಳಿಂದ ನೀಡಲ್ಪಟ್ಟ ಈ ಪ್ರಾಚಿನ ಕಲೆ ಇಂದು ಇಡೀ ಜಗತ್ತಿಗೆ ಭಾರತ ನೀಡುತ್ತಿದೆ. ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಸಾಹಿತ್ಯ, ಸಂಗೀತ, ಕಲೆ, ನಾಟ್ಯ ಇವುಗಳಲ್ಲಿ ಆಸಕ್ತಿ ಮೂಡಿಸಿ ಅದರಲ್ಲಿ ತರಬೇತಿ ನೀಡಬೇಕು. ಅಂದಾಗ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಉಜಿರೆಯ ಎಸ್‌ಡಿಎಮ್ ಕಾಲೇಜಿನ ಪ್ರಾದ್ಯಾಪಕ ಡಾ. ಶ್ರೀಧರ್ ಭಟ್ ಬಾಲಿಗದ್ದೆ ಮಾತನಾಡಿ, ಪ್ರತಿಭಾವಂತರ ಜಿಲ್ಲೆ ನಮ್ಮದಾಗಿದೆ, ಅನೇಕರಿಗೆ ಅವಕಾಶಗಳ ಕೊರತೆಯಿಂದಾಗಿ ಅವರ ಪ್ರತಿಭೆ ಅಡಗಿ ಹೋಗುತ್ತದೆ ಅದನ್ನ ಪೋಷಿಸುವ ಕಾರ್ಯವಾಗಬೇಕಾಗಿದೆ ಎಂದರು.

ಸಿದ್ದಾಪುರ ಕಾಜಿನ ಮನೆಯ ಹವ್ಯಕ ಮಹಾಸಭೆಯ ನಿರ್ದೇಶಕ ಗಣೇಶ ಭಟ್ ಮಾತನಾಡಿ, ಇದು ಅದ್ಭುತ ಕಲೆ, ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದರು.

ನೃತ್ಯ ಗುರು ಸುಮಾ ಹೆಗಡೆ ಗುರುವಂದನೆ ಸ್ವೀಕರಿಸಿ ಮಾತನಾಡಿ, ಭರತ ನಾಟ್ಯ ಗುರು ಮುಖೆನ ಮಾತ್ರ ಕಲಿಯುವುದಕ್ಕೆ ಸಾಧ್ಯ ಎಂದರು.

ಈ ಸಂದರ್ಭ ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿ ಗುಡ್ಡೆ, ಶಂಕರ್ ಭಟ್ ತಾರೀಮಕ್ಕಿ, ಜಿ.ಎನ್. ಭಟ್, ಸುಮಾ ತೊಂಡೆಕೆರೆ, ನಿರಂಜನ್ ಭಟ್ ಮತ್ತು ಕಲಾವಿದರಾದ ಮಂಜುನಾಥ್ ಪುತ್ತೂರು ಬಾಲಸುಭ್ರಮಣ್ಯ ಬೆಂಗಳೂರು, ವೇಣುಗೋಪಾಲ್ ಬೆಂಗಳೂರು, ದೀಪಕ್ ಹೆಬ್ಬಾರ್ ಬೆಂಗಳೂರು, ರಾಘವೇಂದ್ರ ಶಿವಮೊಗ್ಗ, ಸುಮಾ ತೊಂಡೆಕೆರೆ ಸಮರ್ಥ ಹಿನ್ನೆಲೆ ಕಲಾವಿದರಾಗಿ ಸಹಕರಿಸಿದರು.

ಭಾರತೀಯ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ವಿ.ಟಿ. ಹೆಗಡೆ ತೊಂಡೆಕೆರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ಮೂರೂರ್ ಸಂದರ್ಭಕ್ಕೆ ಸರಿಯಾಗಿ ವಿವರಿಸುತ್ತಾ ಸಮರ್ಥವಾಗಿ ನಿರ್ವಹಿಸಿದರು ಕೃಪಾ ಹೆಗಡೆ ವಿವಿಧ ಬಂಧಗಳಲ್ಲಿ 3 ಗಂಟೆಗಳ ಕಾಲ ಸುಂದರವಾದ ನೃತ್ಯ ಪ್ರದರ್ಶನ ನೀಡಿದಳು.