ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ, ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಭರತೋತ್ಸವ -2025 ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಲಾವಿದ ಎಸ್. ನಂಜುಂಡರಾವ್ ಮಾತನಾಡಿ, ಎರಡು ಸಾವಿರ ವರ್ಷಗಳಿಗೂ ಪ್ರಾಚೀನವಾದ ನೃತ್ಯ ಕಲೆಯಾದ ಭರತನಾಟ್ಯವು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ. ಈ ದೈವಿಕ ಕಲೆಯು ಭಾರತೀಯ ಸನಾತನ ಸಂಸ್ಕೃತಿಯ ಹಾಗೂ ಆಚಾರ ವಿಚಾರಗಳನ್ನು ವೈಭವೀಕರಿಸುವ ವಿದ್ಯೆಯಾಗಿದ್ದು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವ ಮಾಧ್ಯಮವಾಗಿದ್ದು, ಇದನ್ನು ಅಭ್ಯಸಿಸುವವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದರು.
ಇಂದಿನ ಪೀಳಿಗೆಯ ಮಕ್ಕಳು, ಯುವಕರು ಕೇವಲ ಪರೀಕ್ಷೆಗಾಗಿ ನೃತ್ಯವನ್ನು ಕಲಿಯದೆ, ಶಾಸ್ತ್ರೀಯ ನೃತ್ಯದ ನಿರಂತರ ಸಾಧನೆಯಲ್ಲಿ ತೊಡಗುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.ಸಂಸ್ಕಾರ ಭಾರತಿ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷ ನಟರಾಜ ಶೆಟ್ಟಿಯವರು ಮಾತನಾಡಿ, ತುಮಕೂರಿನ ನೃತ್ಯ ಇತಿಹಾಸದಲ್ಲಿ ಸಾಯಿ ರಾಮನ್ ನೃತ್ಯ ಕೇಂದ್ರ ಒಂದು ದಂತಕಥೆಯಾಗಿ ಶಾಶ್ವತವಾಗಿ ಉಳಿಯಲಿದೆ ಎಂದರು.
ವಿದ್ವಾನ್ ಡಾ. ಸಾಗರ್ ಟಿ.ಎಸ್.ರವರು ತಮ್ಮ ಆಧ್ಯಾತ್ಮಿಕ ಗುರುಗಳಾದ ಶಿರಡಿ ಸಾಯಿಬಾಬಾ ಮತ್ತು ನೃತ್ಯ ಗುರುಗಳಾದ ಕೆ.ಎಂ. ರಾಮನ್ ರವರ ಹೆಸರನ್ನು ಜೋಡಿಸಿ ತಮ್ಮ ನೃತ್ಯ ಶಾಲೆಯನ್ನು ತೆರೆದಿದ್ದು ಅವರ ಗುರು ಭಕ್ತಿಯನ್ನು ತೋರಿಸಿದರೆ, ಆ ಗುರುಗಳ ಆಶೀರ್ವಾದ ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದರೆ ತಪ್ಪಾಗಲಾರದು ಎಂದರು.ಧಾರವಾಡದ ನೃತ್ಯ ಗುರುಗಳಾದ ವಿದುಷಿ ನಾಗರತ್ನ ಹಡಗಲಿ ಮಾತನಾಡಿ, ಗುರು ಶಿಷ್ಯ ಪರಂಪರೆಯಲ್ಲಿ ಕಲಿಸಲಾಗುವ ಭರತನಾಟ್ಯ ಕಲೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಿ, ಅವರಿಗೆ ಉತ್ತಮ ಅಭ್ಯಾಸ ಮಾಡಿಸಿ ಪ್ರದರ್ಶನಗಳಿಗೆ, ಪರೀಕ್ಷೆಗಳಿಗೆ ಅವಕಾಶ ನೀಡಿ ನೃತ್ಯದಲ್ಲಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ನೃತ್ಯ ಕೇಂದ್ರದ ವಿದುಷಿ. ರತಿಕ ಹಾಗೂ ವಿದ್ವಾನ್. ಸಾಗರ್ ಇವರ ಅವಿರತ ಶ್ರಮವಿದೆ ಎಂದರು.
ಈ ನೃತ್ಯೋತ್ಸವದಲ್ಲಿ ಕುಚಿಪುಡಿ, ಭಗವದ್ಗೀತೆ ನೃತ್ಯ ರೂಪಕ, ಏಕವ್ಯಕ್ತಿ ನೃತ್ಯ, ರಾಮಾಯಣ ನೃತ್ಯ ಸೇರಿ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದ ಸುಮಾರು 60 ವಿದ್ಯಾರ್ಥಿಗಳು ನೃತ್ಯಾಂಜಲಿ ಕಾರ್ಯಕ್ರಮ ನಡೆಸಿಕೊಟ್ಟರು.ಸುಮಾರು 120 ಕ್ಕೂ ಹೆಚ್ಚು ಕಲಾವಿದರು ತಮ್ಮ ಭಾವ ಅಭಿನಯದಿಂದ ಕಲಾಸಕ್ತರಿಗೆ ಮನರಂಜಿಸಿದರು.
ಮಾರುತಿ ವಿದ್ಯಾ ಕೇಂದ್ರದ ನಿರ್ದೇಶಕರಾದ ಉಮಾ ಪ್ರಸಾದ್, ಸಾಯಿ ರಾಮನ್ ನೃತ್ಯ ಕೇಂದ್ರದ ಅಧ್ಯಕ್ಷೆ ಸುಮಾ ಪ್ರಸಾದ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ವಿದುಷಿ ಉಷಾ ಬಸಪ್ಪ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))