ಸಾರಾಂಶ
ಮುತ್ತು ಕಟ್ಟುವ ಅನಿಷ್ಟ ಪದ್ಧತಿಯನ್ನು ಕಣ್ಣು ತಪ್ಪಿಸಿ ಯಾರಾದರೂ ಮಾಡಿಯಾರು ಎಂದು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ನಿರಂತರ ಗಸ್ತು ಮಾಡಿ ಹದ್ದಿನ ಕಣ್ಣು ಇಟ್ಟಿದ್ದರು.
ಹರಪನಹಳ್ಳಿ: ಲಕ್ಷಾಂತರ ಭಕ್ತರಿಂದ ಆರಾಧಿಸಲ್ಪಡುವ ತಾಲೂಕಿನ ಉಚ್ಚಂಗಿದುರ್ಗದ ಇತಿಹಾಸ ಪ್ರಸಿದ್ಧ ಏಳು ಸುತ್ತಿನ ಕೋಟೆ ಬೆಟ್ಟದ ಮೇಲಿರುವ ಉಚ್ಚಂಗೆಮ್ಮದೇವಿ ದರ್ಶನಕ್ಕೆ ಭರತ್ ಹುಣ್ಣಿಮೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಬುಧವಾರ ಆಗಮಿಸಿದ್ದರು.
ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿ, ಶಿವಮೊಗ್ಗ ಇನ್ನು ಅನೇಕ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ತಮ್ಮ ಹರಕೆ ತೀರಿಸಿದರು. ಭಕ್ತರು "ಉಚ್ಚಂಗೆಮ್ಮ ನಿನ್ನಾಲ್ಕು ಉಧೋ ಉಧೋ " ಎಂದು ಕೂಗುತ್ತಾ ಹರಕೆ ತೀರಿಸಿದರು.ಆನೆಹೊಂಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಹಳೆ ಪಡಲಿಗೆಯನ್ನು ತೆಗೆದು ಹೊಸ ಪಡಲಿಗೆಯನ್ನು ಹಾಗೂ ಬಳೆಗಳನ್ನು ಇಟ್ಟು ಪೂಜೆ ನೆರವೇರಿಸಿದರು.
ಉತ್ಸವಾಂಭ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮಲ್ಲಪ್ಪ ಮಾತನಾಡಿ, ಜಗಳೂರು ಶಾಸಕರು ಹಾಗೂ ವಿಜಯನಗರ ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಭರತ ಹುಣ್ಣಿಮೆಯ ಕಾರ್ಯಕ್ರಮದಂತೆ ಗ್ರಾಪಂ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ವಿದ್ಯುತ್ ವ್ಯವಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬರುವ ಲಕ್ಷಾಂತರ ಭಕ್ತರಿಗೆ ಪ್ರಸಾದ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಮುತ್ತು ಕಟ್ಟುವ ಅನಿಷ್ಟ ಪದ್ಧತಿಯನ್ನು ಕಣ್ಣು ತಪ್ಪಿಸಿ ಯಾರಾದರೂ ಮಾಡಿಯಾರು ಎಂದು ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ನಿರಂತರ ಗಸ್ತು ಮಾಡಿ ಹದ್ದಿನ ಕಣ್ಣು ಇಟ್ಟಿದ್ದರು.
ಭರತ ಹುಣ್ಣಿಮೆಯ ಪ್ರಯುಕ್ತ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ ನೇತೃತ್ವದಲ್ಲಿ ಅರಸೀಕೆರೆ ಪಿಎಸ್ಐ ಕೆ.ರಂಗಯ್ಯ ಮೂರು ದಿನಗಳಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ದಾವಣಗೆರೆ, ಹರಪನಹಳ್ಳಿ ಡಿಪೋದಿಂದ ಸಾರಿಗೆ ವ್ಯವಸ್ಥೆ, ಗ್ರಾಪಂನಿಂದ ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್ ಇಲಾಖೆಯಿಂದ ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಲಕ್ಷಾಂತರ ಭಕ್ತರು ಉಚ್ಚೆಂಗೆಮ್ಮದೇವಿ ದರ್ಶನ ಪಡೆದು ಪುನೀತರಾದರು.