ಸಾರಾಂಶ
ವರ್ಷಪೂರ್ತಿ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಸರಿಯಾದ ದರ ಸಿಗದೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಾಗಲೇ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನಿಸದೇ ಕಣ್ಣುಮುಚ್ಚಿ ಕುಳಿತಿದೆ. ತಕ್ಷಣ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಬೇಕು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಬೆಂಬಲಿಸಿ ಹಾಸನ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಸದಸ್ಯರು ಮೆರವಣಿಗೆ ನಡೆಸಿ ಕಬ್ಬಿಗೆ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಬೆಲೆ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಜಿಲ್ಲಾ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಸಣ್ಣೇಗೌಡ ಮಾತನಾಡಿ, ವರ್ಷಪೂರ್ತಿ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಸರಿಯಾದ ದರ ಸಿಗದೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಾಗಲೇ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನಿಸದೇ ಕಣ್ಣುಮುಚ್ಚಿ ಕುಳಿತಿದೆ. ತಕ್ಷಣ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ಆದ್ದರಿಂದ ಹಾಸನ ಜಿಲ್ಲಾಧಿಕಾರಿಗಳ ಮೂಲಕವೂ ಸರ್ಕಾರಕ್ಕೆ ಹಾಸನ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮನವಿ ಪತ್ರ ಸಲ್ಲಿಸುತ್ತಿದೆ ಎಂದರು.ಪ್ರಸ್ತುತ ಪ್ರತಿ ಟನ್ ಕಬ್ಬಿಗೆ ೩,೦೦೦ ನೀಡಲಾಗುತ್ತಿದ್ದು, ಬೆಳೆ ವೆಚ್ಚ ಮತ್ತು ಕೂಲಿ ಖರ್ಚುಗಳ ಹಿನ್ನೆಲೆ ಇದು ಅತ್ಯಂತ ಕಡಿಮೆ ದರ ಎಂದು ಅವರು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಲ್ಲಿ ೩,೬೦೦ ನೀಡಲಾಗುತ್ತಿದೆ. ಕರ್ನಾಟಕದಲ್ಲೂ ಕನಿಷ್ಠ ೩,೫೦೦ (ಈಖP+ಒSP) ನಿಗದಿಪಡಿಸಬೇಕು ಎಂದು ಕಿಸಾನ್ ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು. ಸರ್ಕಾರ ಕಬ್ಬು ನಿಯಂತ್ರಣ ಮಂಡಳಿಯ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಮಾನ ದರ ನಿಗದಿಪಡಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷ ಮಲ್ಲಪ್ಪ, ಕುಮಾರಸ್ವಾಮಿ, ರಾಜು, ಚಂದ್ರಗೌಡ, ಸರೋಜಮ್ಮ, ಕೃಷ್ಣ ಕುಮಾರ್ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.