ರೇಲ್ವೆ ಮೇಲ್ಸೇತುವೆ ನೇರವಾಗಿ ನಿರ್ಮಿಸಲು ಆಗ್ರಹ

| Published : Jul 25 2025, 12:30 AM IST

ಸಾರಾಂಶ

ಕೇಂದ್ರ ಸರ್ಕಾರದ ಸೇತು ಭಾರತ್ ಯೋಜನೆಯಡಿ ಪಟ್ಟಣದ ರಾಷ್ಟ್ರಪತಿ ರಸ್ತೆಯ ರೇಲ್ವೆ ಲೆವಲ್ ಕ್ರಾಸಿಂಗ್ ಬಳಿ ರೇಲ್ವೆ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿಗೆ ನೀಡಿವೆ,

ಕನ್ನಡಪ್ರಭ ವಾರ್ತೆ ನಂಜನಗೂಡು ರಾಷ್ಟ್ರಪತಿ ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿ ಇರುವ ರೇಲ್ವೆ ಲೆವಲ್ ಕ್ರಾಸಿಂಗ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ರೇಲ್ವೆ ಮೇಲ್ಸೇತುವೆಯನ್ನು ನೇರವಾಗಿ ನಿರ್ಮಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಪ್ರತಿಭಟಿಸಿದರು.ಪಟ್ಟಣದ ರಾಷ್ಟ್ರಪತಿ ರಸ್ತೆಯ ರೇಲ್ವೆ ಲೆವಲ್ ಕ್ರಾಸಿಂಗ್ ಬಳಿ ಗುರುವಾರ ಜಮಾವಣೆಗೊಂಡ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಪ್ರತಿಭಟನೆ ನಡೆಸಿ, ಪೂರ್ವ ನಿರ್ಧಾರದಂತೆ ರೇಲ್ವೆ ಮೇಲ್ಸೇತುವೆ ನಿರ್ಮಿಸುವಿಕೆ ಆಗ್ರಹಿಸಿ ಘೋಷಣೆ ಕೂಗಿದರು.ರಾಜ್ಯ ಜನ ಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ವಿಜಯ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಸೇತು ಭಾರತ್ ಯೋಜನೆಯಡಿ ಪಟ್ಟಣದ ರಾಷ್ಟ್ರಪತಿ ರಸ್ತೆಯ ರೇಲ್ವೆ ಲೆವಲ್ ಕ್ರಾಸಿಂಗ್ ಬಳಿ ರೇಲ್ವೆ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಪ್ಪಿಗೆ ನೀಡಿವೆ, ರೇಲ್ವೆ ಇಲಾಖೆ ಅಧಿಕಾರಿಗಳು ಮೇಲ್ಸೇತುವೆ ನಿರ್ಮಾಣಕ್ಕಾಗಿ ರಾಷ್ಟ್ರಪತಿ ರಸ್ತೆಯ ಇಕ್ಕೆಲಗಳಲ್ಲಿ ಮಾರ್ಕಿಂಗ್ ಸಹ ಮಾಡಿದ್ದಾರೆ. ಸ್ಥಳೀಯ ನಗರಸಭೆ ಸಹ ಸರ್ವಾನುಮತದ ನಿರ್ಣಯ ಕೈಗೊಂಡು ಒಪ್ಪಿಗೆ ಸೂಚಿಸಿದೆ, ರಾಷ್ಟ್ರಪತಿ ರಸ್ತೆಯ ರೇಲ್ವೆ ಲೆವಲ್ ಕ್ರಾಸಿಂಗ್ ನಲ್ಲಿ ರೈಲು ಓಡಾಡುವಾಗ ರೇಲ್ವೆ ಗೇಟ್ ಹಾಕುವುದರಿಂದ ನಾಗರೀಕರ ಹಾಗೂ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ರೈಲು ಬಂದು-ಹೋಗುವ ನಡುವೆ ಅರ್ಧ ಗಂಟೆ ಹೆಚ್ಚು ಕಾಲ ಲೆವಲ್ ಕ್ರಾಸಿಂಗ್ ದಾಟಲು ಕಾಯಬೇಕಾದ ಪರಿಸ್ಥಿತಿ ಇದೆ, ಹೀಗಾಗಿ ಪಟ್ಟಣದ ಅಭಿವೃದ್ದಿಯ ಹಿತದೃಷ್ಟಿಯಿಂದ ಈ ಮೊದಲು ಸಿದ್ದಪಡಿಸಿದ ನಕ್ಷೆಯಂತೆ ರೇಲ್ವೆ ಮೇಲ್ಸೇತುವೆ ನೇರವಾಗಿ ನಿರ್ಮಾಣವಾಗಬೇಕು ಎಂದು ನಗರಸಭೆ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ತಿಳಿಸಿದರು.ಪೂರ್ವ ನಿರ್ಧಾರಿತ ನಕ್ಷೆಯನ್ನು ರೇಲ್ವೆ ಇಲಾಖೆ ಬದಲಿಸಲು ಹೊರಟರೆ ಪಟ್ಟಣದ ನಾಗರೀಕರ ಪ್ರತಿಭಟನೆ ಎದುರಿಸಬೇಕಾಗುತ್ತದೆ, ಪಟ್ಟಣದ ಪ್ರಗತಿಪರ ಸಂಘಟನೆಗಳು ತೀವ್ರವಾದ ಹೋರಾಟ ರೂಪಿಸಬೇಕಾಗುತ್ತದೆ, ಆದ್ದರಿಂದ ರೇಲ್ವೆ ಸಚಿವರ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಎಚ್ಚೆತ್ತು ಪೂರ್ವ ನಿರ್ಧಾರದಂತೆ ರೇಲ್ವೆ ಮೇಲ್ಸೇತುವೆಯನ್ನು ನೇರವಾಗಿಯೇ ನಿರ್ಮಿಸಲು ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬಸವಣ್ಣ, ಮಹದೇವಸ್ವಾಮಿ, ಸರ್ವೇಶ್, ನಾಗರಾಜು, ಪರಮೇಶ್, ಬಸವರಾಜು, ಶಿವಕುಮಾರ್ ಇದ್ದರು.