ಸಾರಾಂಶ
ಸಿರಿಗೆರೆ: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ತುಂಗಾಭದ್ರೆಯಿಂದ ಹರಿದು ಬರುತ್ತಿರುವ ನೀರಿನಿಂದ ತುಂಬಿ ಕೋಡಿ ಹರಿದಿರುವ ಭರಮಸಾಗರದ ಜೋಡಿ ಕೆರೆಗಳಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಒಟ್ಟುಗೂಡಿ ಬಾಗಿನ ಅರ್ಪಿಸಿದರು.ಈ ವೇಳೆ ಮಾತನಾಡದ ಶ್ರೀಗಳು, ಏತ ನೀರಾವರಿ ಯೋಜನೆಯು ಅಮೆರಿಕಕ್ಕೂ ಸುದ್ದಿಯಾಗಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಅಧ್ಯಯನದ ಪೋಸ್ಟ್ ಡಾಕ್ಟರಲ್ ಸ್ಟಡೀಸ್ ವಿಷಯವನ್ನಾಗಿ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಏತ ನೀರಾವರಿ ಯೋಜನೆ ಬೆಳೆದು ಬಂದ ದಾರಿ ಹಾಗೂ ಇದರ ಉಪಯೋಗ ಬಗ್ಗೆ ಅಧ್ಯಯನ ನಡೆಯಲಿದೆ.
ಕೆರೆದಂಡೆಗೆ ಅಡಿಕೆಸಿಪ್ಪೆ ಹಾಕುವುದು ಕಾನೂನು ಬಾಹಿರ. ಆದರೆ ಇವತ್ತು ಕಾನೂನಿಗೆ ಹೆದರುವುದಿಲ್ಲ. ಕಾನೂನು ಕ್ರಮ ಕೈಗೊಂಡರೂ ಸಹ ಯಾರು ಬುದ್ಧಿ ಕಲಿಯುವುದಿಲ್ಲ. ಇದಕ್ಕೆ ಇದೊಂದೇ ಪರಿಹಾರ ಅಲ್ಲ. ಎಲ್ಲರಿಗೂ ಧರ್ಮದ ಬಗ್ಗೆ ಅಪಾರ ಗೌರವ, ನಿಷ್ಠೆ ಇದೆ. ಹಾಗಾಗಿ ಅಂತವರಿಗೆ ಧರ್ಮದ ಹಾದಿಯಲ್ಲಿ ತಿಳಿ ಹೇಳಬೇಕು ಎಂದು ಹೇಳಿದರು.ಶಾಂತಿವನದಲ್ಲಿ ಅಡಿಕೆಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತನೆ ಮಾಡುವ ಕೆಲಸ ನಡೆಯುತ್ತದೆ. ಕೆರೆಯ ಸುತ್ತಮುತ್ತ ಹಾಕಿರುವ ಎಲ್ಲಾ ಅಡಿಕೆ ಸಿಪ್ಪೆಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದು ಸಿರಿಗೆರೆ ಶಾಂತಿವನಕ್ಕೆ ರವಾನಿಸಲು ತಿಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.ನೀರಾವರಿ ನಿಗಮದ ಮಾಜಿ ಎಂ.ಡಿ.ಮಲ್ಲಿಕಾರ್ಜುನ ಗುಂಗೆ, ಕೆರೆ ಸಮಿತಿ ಅಧ್ಯಕ್ಷ ಶಶಿ ಪಾಟೀಲ್ ಮುಖಂಡರಾದ ಎಸ್.ಎಂ.ಎಲ್ ತಿಪ್ಪೇಸ್ವಾಮಿ, ಶೈಲೇಶ್‌ಪಾಟೀಲ್, ಸಾ ಮಿಲ್ ಶಿವಣ್ಣ, ಕೋಗುಂಡೆ ಮಂಜುನಾಥ್, ಡಿ.ವಿ.ಎಸ್.ಪ್ರದೀಪ್, ಸಿ.ಆರ್.ನಾಗರಾಜ್, ಕೊಳಹಾಳಂ ರಾಜಣ್ಣ, ಚಿಕ್ಕಬೆನ್ನೂರು ತೀರ್ಥಪ್ಪ, ಹನುಮಂತಪ್ಪ ಹಾಗೂ ಸಾವಿರಾರು ಭಕ್ತರು ಇದ್ದರು.