ಸಹಕಾರಿ ರತ್ನ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್‌ರಿಗೆ ಅಭಿನಂದನಾ ಸಮಿತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಾಗರಿಕ ಪೌರ ಸನ್ಮಾನ ‘ಭಾಸ್ಕರಾಭಿನಂದನ’ ಕಾರ್ಯಕ್ರಮ ನೆರವೇರಿತು.
ಮಂಗಳೂರು: ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕಂಬಳ, ಸಹಕಾರ, ಕೃಷಿ ಸೇರಿದಂತೆ ತನ್ನ ಆಸಕ್ತಿಯ ಎಲ್ಲ ಕ್ಷೇತ್ರದಲ್ಲೂ ಯಶಸ್ಸಿನ ಹಸ್ತಾಕ್ಷರ ಬರೆದವರು ಭಾಸ್ಕರ್ ಕೋಟ್ಯಾನ್. ಶ್ರೀಮಂತರಿಂದ ಸಮಾಜದ ಕಟ್ಟಕಡೆಯವರೆಗೂ ಒಡನಾಡಿಯಾಗಿದ್ದು, ತನ್ನಿಂದ ಅಥವಾ ಪರರ ಮುಖೇನ ಸಮಾಜಕ್ಕೆ ನೆರವು ನೀಡಿದ ವಿಶಾಲ ಹೃದಯದ ವ್ಯಕ್ತಿತ್ವದ ಭಾಸ್ಕರ್ ಕೋಟ್ಯಾನ್ ಜೀವನ ಮಾದರಿ ಎಂದು ಸೊಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಸಹಕಾರಿ ರತ್ನ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್‌ರಿಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಿತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಆಯೋಜಿಸಲಾದ ನಾಗರಿಕ ಪೌರ ಸನ್ಮಾನ ‘ಭಾಸ್ಕರಾಭಿನಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಬದುಕು ನೆಲೆ ನಿಂತಿರುವುದು ಮರೆಯುವಿಕೆ ಮತ್ತು ಸ್ಮರಣೆಯಲ್ಲಿದೆ. ಮರೆಯುವಿಕೆ ಗುಣವಿರುವ ಕಾರಣ ನಾವು ಬದುಕುತ್ತಿದ್ದೇವೆ. ಯಾರು ಸಮಾಜಕ್ಕೆ ಸೇವೆ ಮಾಡಿದ್ದಾರೋ ಅದನ್ನು ಗುರುತಿಸಿ ಸ್ಮರಣೆ ಮಾಡುವ ವಿಶಾಲ ಮನೋಭಾವ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯಲ್ಲಿದ್ದರೆ ಈ ದೇಶ ರಾಮರಾಜ್ಯವಾಗಬಹುದು. ಈ ನಿಟ್ಟಿನಲ್ಲಿ ಭಾಸ್ಕರಾಭಿನಂದನೆ ಅರ್ಥಪೂರ್ಣ ಕಾರ್ಯಕ್ರಮ ಎಂದರು.ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ, ಭಾಸ್ಕರ್ ಕೋಟ್ಯಾನ್ ಅವರ ಪ್ರಭಾವ ಎರಡೂ ಜಿಲ್ಲೆಗಳಲ್ಲಿದ್ದು, ತಾನು ಸೇವೆ ಸಲ್ಲಿಸುವ ಕ್ಷೇತ್ರದಲ್ಲಿ ಅವರ ಬದ್ಧತೆ, ಶ್ರದ್ಧೆ, ಪರಿಶ್ರಮ ನಿಜಕ್ಕೂ ಮಾದರಿಯಾದುದು. ರಾಷ್ಟ್ರೀಯ, ಧಾರ್ಮಿಕ ಚಿಂತಕರಾಗಿ ಹಲವು ಕ್ಷೇತ್ರಗಳಲ್ಲಿ ಈ ರೀತಿ ಯಶಸ್ವಿಯಾಗುವ ವ್ಯಕ್ತಿತ್ವ ತೀರಾ ಅಪರೂಪವಾಗಿದೆ ಎಂದರು.ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿನಂದನಾ ಭಾಷಣದಲ್ಲಿ, ಭಾಸ್ಕರ್ ಕೋಟ್ಯಾನ್ ಅವರು ನಾನಾ ಕ್ಷೇತ್ರದಲ್ಲಿ ಸೇವೆ ಮಾಡಿದ ಅಪರೂಪದ ವ್ಯಕ್ತಿತ್ವ. ಕಂಬಳ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ಅವರು ಮಾಡಿದ ಹೋರಾಟದಿಂದ ಇವತ್ತು ಕಂಬಳ ಈ ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಮಾತ್ರವಲ್ಲದೆ, ಹೊಸ ಪೀಳಿಗೆ ಕಂಬಳಕ್ಕೆ ಆಸಕ್ತಿ ತೋರಲು ಕಾರಣವಾಗಿದೆ ಎಂದರು.ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರ್, ಕೋಶಾಧಿಕಾರಿ ಪದ್ಮರಾಜ್ ಆರ್. ಜೈನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಸಂಚಾಲಕರಾದ ಕೆ.ಟಿ. ಸುವರ್ಣ, ಉದಯ ಕೋಟ್ಯಾನ್ ಮತ್ತಿತರರು ಇದ್ದರು.
ಸಂಚಾಲಕ ಅವಿನಾಶ್ ಸುವರ್ಣ ಸ್ವಾಗತಿಸಿದರು. ಕೆ.ಟಿ. ಸುವರ್ಣ ವಂದಿಸಿದರು. ದಿನೇಶ್ ರಾಯಿ ನಿರೂಪಿಸಿದರು.ಸಹಕಾರಿ ರತ್ನಗೆ ಭಾಸ್ಕರಾಭಿನಂದನೆ ಸಹಕಾರಿ ರತ್ನ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್ ಹಾಗೂ ಪಾರ್ವತಿ ಭಾಸ್ಕರ್ ಕೋಟ್ಯಾನ್ ದಂಪತಿಗೆ ಭಾಸ್ಕರಾಭಿನಂದನೆ ಸಲುವಾಗಿ ಶಾಲು ಹೊದಿಸಿ, ಪೇಟಾ ತೊಡಿಸಿ, ಮಾಲಾರ್ಪಣೆ ಮಾಡಿ, ಸ್ಮರಣಿಕೆ, ಸನ್ಮಾನ ಪತ್ರ, ಬುಟ್ಟಿಯಲ್ಲಿ ಫಲಪುಷ್ಪ ನೀಡಿ ಅಭಿನಂದಿಸಲಾಯಿತು. ಭಾಸ್ಕರಾಭಿನಂದನೆ ಸ್ವೀಕರಿಸಿದ ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ಮಾತನಾಡಿ, ಸಮಾಜಕ್ಕೆ ನಾನು ಮಾಡಿದ ಸೇವೆ ಕಿಂಚಿತ್ತಾಗಿದೆ. ಇನ್ನೂ ಸಮಾಜದ ಸೇವೆ ಮಾಡಲು ಬಾಕಿಯಿದೆ. ನಾನು ನಾನಾ ಕ್ಷೇತ್ರದಲ್ಲಿ ಸೇವೆ ಮಾಡಿದ್ದರೂ ನನಗೆ ಪ್ರತಿ ಕ್ಷೇತ್ರದಲ್ಲೂ ಒಬ್ಬೊಬ್ಬರು ಗುರುಗಳಿದ್ದರು. ಸಹಕಾರಿ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ನಾನು ಸಹಕಾರಿ ಕ್ಷೇತ್ರಕ್ಕೆ ಬರುವಂತಾದರೆ, ಅಮರನಾಥ ಶೆಟ್ಟಿಯವರು ನನ್ನ ರಾಜಕೀಯ ಕ್ಷೇತ್ರದ ಗುರುಗಳು. ಇದೇ ರೀತಿ ನಾನಾ ಕ್ಷೇತ್ರದಲ್ಲಿ ನನಗೆ ಮಾರ್ಗದರ್ಶಕರಿದ್ದರು. ಬಾಲ್ಯದಿಂದಲೂ ನಾನು ಕಷ್ಟಪಟ್ಟು ಬೆಳೆದವನಾಗಿದ್ದು, ಕಷ್ಟದ ಜೀವನ ನನ್ನನ್ನು ಈ ತನಕ ಬೆಳೆಸಿತು ಎಂದರು. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಲ್ಲವ ಬ್ರಿಗೇಡ್‌ಗೆ ಸಂಘದ ಸಂಸ್ಥಾಪಕ, ಭಾಸ್ಕರಾಭಿನಂದನೆ ಕಾರ್ಯಕ್ರಮದ ಸಂಚಾಲಕ ಸದಾನಂದ ಪೂಜಾರಿ ಅವರನ್ನು ಅಭಿನಂದಿಸಲಾಯಿತು.