ಭಟಪ್ಪನಹಳ್ಳಿ ಗ್ರಾಮದಲ್ಲಿ ಬರೋಬ್ಬರಿ 29 ವರ್ಷದಿಂದ ಇಟಗಿ ಭೀಮಾಂಭೀಕಾದೇವಿ ಪುರಾಣ ಪ್ರವಚನ ಜರುಗುತ್ತಿದ್ದು

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ತಾಲೂಕಿನ ಭಟಪ್ಪನಹಳ್ಳಿ ಗ್ರಾಮ ಧರ್ಮದೇವತೆ ಇಟಗಿಶ್ರೀಭೀಮಾಂಬಿಕಾದೇವಿ ದೇವಿಯ ಎರಡನೇ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಬಯಲು ಸೀಮೆಯ ಗ್ರಾಮವಾದ ಭಟಪ್ಪನಹಳ್ಳಿಯ ಭಾಗ್ಯನಿಧಿಯಾದ ಶ್ರೀಭೀಮಾಂಬಿಕಾದೇವಿಯ ನೂತನ ಪಂಚಕಳಸ ರಥೋತ್ಸವ ಏ.18ರ ಶನಿವಾರ ಸಂಜೆ 5 ಗಂಟೆಗೆ ಜರುಗಲಿದೆ.

ಭಟಪ್ಪನಹಳ್ಳಿ ಗ್ರಾಮದಲ್ಲಿ ಬರೋಬ್ಬರಿ 29 ವರ್ಷದಿಂದ ಇಟಗಿ ಶ್ರೀಭೀಮಾಂಬಿಕಾದೇವಿ ಪುರಾಣ ಪ್ರವಚನ ಜರುಗುತ್ತಿದ್ದು. ಪ್ರತಿ ವರ್ಷ ಒಂದಿಲ್ಲ ಒಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗುತ್ತಾ ಬಂದಿವೆ. ಭಟಪ್ಪನಹಳ್ಳಿ ಗ್ರಾಮಸ್ಥರು ಸದಾ ಧರ್ಮದೇವತೆಯ ಆರಾಧನೆ ಮಾಡುತ್ತಾ ಧರ್ಮದ ದಾರಿಯಲ್ಲಿ ನಡೆದು ಸುಖ ಶಾಂತಿ ಪಡೆದಿದ್ದಾರೆ. ಈ ಮಹಾತಾಯಿ ಭೀಮಾಂಬೆಯ ಕೃಪೆಯಿಂದ ಭಟಪ್ಪನಹಳ್ಳಿ ಸಹ ಧರ್ಮದೇವತೆ ಪುಣ್ಯಕ್ಷೇತ್ರವಾಗಿದೆ. ಭಕ್ತರ ಇಚ್ಛೆ ಪೂರೈಸುವ ಸುಕ್ಷೇತ್ರವಾಗಿದೆ. ಈ ಬಯಲು ನಾಡಿನಲ್ಲಿ ಭಾಗ್ಯನಿಧಿಯಾಗಿ ಇಟಗಿಯ ಪರಮೇಶ್ವರಿ ಭೀಮಾಂಬೆಯ ಪುಣ್ಯತಾಣವಾಗಿದೆ. ಧರ್ಮದ ಮಹಾಮಂದಿರವಾಗಿ ಭಟಪ್ಪನಹಳ್ಳಿ ಕಂಗೋಳಿಸುತ್ತಿದೆ.

ಪ್ರತಿ ವರ್ಷ ಜರುಗುವ ಪುರಾಣ ಮಂಗಳದಲ್ಲಿ ಆಗಮಿಸುವ ಅಪಾರ ಭಕ್ತ ಸಮೂಹಕ್ಕೆ ವಿಶೇಷ ಅನ್ನ ಸಂತರ್ಪಣೆ ಸಹ ಜರುಗುತ್ತದೆ. ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುತ್ತಿದೆ. ದೇವಿ ಮೇಲಿನ ಅಪಾರ ಭಕ್ತಿ ಹಾಗೂ ಶ್ರದ್ಧೆಯಿಂದ 2022,ಮೇ, 1ರಂದು ನೂತನ ದೇವಾಲಯವನ್ನು ಗ್ರಾಮಸ್ಥರು ಗ್ರಾಮದಲ್ಲಿ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಸಹ ಮಾಡಿದ್ದಾರೆ. ಪ್ರತಿ ವರ್ಷ ಲಘು ರಥೋತ್ಸವ ಜರುಗುತ್ತಿದ್ದು, ಈ ವರ್ಷ ಗ್ರಾಮಸ್ಥರು ನೂತನ ರಥ ನಿರ್ಮಿಸಿದ್ದಾರೆ.

ನೂತನ ರಥ: ₹25 ಲಕ್ಷ ವೆಚ್ಚದಲ್ಲಿ ಭಟಪ್ಪನಹಳ್ಳಿ ಗ್ರಾಮಸ್ಥರು ನೂತನ 31 ಅಡಿ ಎತ್ತರದ ಪಂಚಕಳಸ ರಥ ನಿರ್ಮಿಸಿದ್ದಾರೆ. ಕಳೆದ ವರ್ಷ ಜಾತ್ರೆಯಲ್ಲಿ ಮಹಾರಥ ನಿರ್ಮಾಣಕ್ಕೆ ಕುಕನೂರಿನ ಮಹಾದೇವ ದೇವರ ಸಾನ್ನಿಧ್ಯದಲ್ಲಿ ಭಕ್ತರು ವಾಗ್ದಾನ ಮಾಡಿದ್ದರು. ಅದರಂತೆ ಮಹಾರಥ ನಿರ್ಮಾಣವಾಗಿದ್ದು, ಏ.18ರ ಸಂಜೆ ಅಪಾರ ಭಕ್ತರ ಮಧ್ಯೆ ಹಾಗೂ ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ. ಶಿರಹಟ್ಟಿಯ ಫಕೀರ ಸಿದ್ದರಾಮ ಸ್ವಾಮೀಜಿ, ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯರು, ಬಳಗಾನೂರಿನ ಶಿವಶಾಂತವೀರ ಶರಣರು, ಶಿವಸಿದ್ದೇಶ್ವರ ಸ್ವಾಮೀಜಿ, ಅಮೋಘಸಿದ್ದೇಶ್ವರ ಮಠದ ಮಾದಯ್ಯ ಗುರವಿನ್, ಮಹಾದೇವ ದೇವರು ಆಗಮಿಸಲಿದ್ದಾರೆ. ನಂತರ ತಿಂಗಳ ಪರ್ಯಂತ ಜರುಗಿದ ದೇವಿಯ ಪುರಾಣ ಮಂಗಲಗೊಳ್ಳುವುದು. ಭೀಮಾಂಭಿಕಾ ದೇವಿಯ ಪುರಾಣ ಸಮಿತಿಯವರು ಹಾಗೂ ಗ್ರಾಮದ ನಾನಾ ಸಂಘ ಸಂಸ್ಥೆಯವರು, ಗ್ರಾಮಸ್ಥರು ಮಹಾರಥೋತ್ಸವದ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

ಧಾರ್ಮಿಕ ಕಾರ್ಯಕ್ರಮ: ಏ. 18ರಂದು ನೂತನ ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಗುವುದು. ನಂತರ 11 ಜೋಡಿ ಸಾಮೂಹಿಕ ವಿವಾಹ ಜರುಗಲಿವೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಲಿದ್ದಾರೆ. ರಾತ್ರಿ 10 ಗಂಟೆಗೆ ಭೀಮಾಂಭಿಕಾ ನವ ತರುಣ ನಾಟ್ಯ ಸಂಘದಿಂದ ರೈತರ ರಾಜ್ಯದಲ್ಲಿ ರಾಯಣ್ಣ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಭಟಪ್ಪನಹಳ್ಳಿ ಗ್ರಾಮ ಭೀಮಾಂಭೀಕಾ ದೇವಿಯ ಕೃಪೆಯಿಂದ ಆಕೆಯ ಸೇವೆಗೆ ಅಣಿಯಾಗಿದೆ. ದೇವಿಯ ಅನುಗ್ರಹ ಭಟಪ್ಪನಹಳ್ಳಿ ಗ್ರಾಮಕ್ಕೆ ಆಗಿದೆ. ದೇವಿ ಬೇಡಿದ ಭಕ್ತರಿಗೆ ಬೇಡಿದ್ದನ್ನು ಕೊಡುವ ಭಾಗ್ಯದಾತೆ ಆಗಿದ್ದಾಳೆ. ಆಕೆಯ ಕೃಪೆಯಿಂದ ಗ್ರಾಮ ಸಹ ಸಮರಸದ ಭಾವೈಕ್ಯತೆ ತಾಣವಾಗಿದೆ. ನೂತನ ರಥಕ್ಕೆ ಇಡೀ ಗ್ರಾಮಸ್ಥರು ಸೇವೆ ಸಲ್ಲಿಸಿ ಭೀಮಾಂಭೀಕಾ ದೇವಿಯ ಪಂಚಕಳಸ ರಥ ಎಳೆಯಲು ಸಿದ್ಧರಾಗಿದ್ದಾರೆ ಎಂದು ಗ್ರಾಮದ ಮುಖಂಡ ಹಂಚ್ಯಾಳಪ್ಪ ಕಲ್ಗೂಡಿ ತಿಳಿಸಿದ್ದಾರೆ