ಇಲ್ಲಿನ ಮುಖ್ಯ ವೃತ್ತದಲ್ಲಿದ್ದ ಗಡಿಯಾರದ ಗೋಪುರವನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಶನಿವಾರ ಸಂಜೆ ತೆರವುಗೊಳಿಸಲಾಗಿದೆ.
24 ವರ್ಷದ ಹಿಂದೆ ಗೋಪುರ ನಿರ್ಮಾಣ: ಗೋಪುರ ಇನ್ನು ನೆನಪು ಮಾತ್ರ
ಕನ್ನಡಪ್ರಭ ವಾರ್ತೆ ಭಟ್ಕಳಇಲ್ಲಿನ ಮುಖ್ಯ ವೃತ್ತದಲ್ಲಿದ್ದ ಗಡಿಯಾರದ ಗೋಪುರವನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಶನಿವಾರ ಸಂಜೆ ತೆರವುಗೊಳಿಸಲಾಗಿದೆ.
2002ರಲ್ಲಿ ಪ್ಯೂರ್ ಗೋಲ್ಡ್ ಮಾಲೀಕ ಶಬೀಬ್ ಕೋಲಾ ಇದನ್ನು ನಿರ್ಮಿಸಿಕೊಟ್ಟಿದ್ದರು. ಶಬೀಬ್ ಕೋಲಾ ದುಬೈಗೆ ಹೋದಾಗ ಅಲ್ಲಿನ ಗಡಿಯಾರದ ಗೋಪುರದ ವಿನ್ಯಾಸ ನೋಡಿ ಅದೇ ಮಾದರಿ ಹೋಲುವ ಗಡಿಯಾರದ ಗೋಪುರವನ್ನು ವೃತ್ತದಲ್ಲಿ ನಿರ್ಮಿಸಿದ್ದರಿಂದ ಇದು ಬಹಳ ಪ್ರಸಿದ್ಧಿ ಪಡೆದಿತ್ತು. ಅಂದು ಭಟ್ಕಳವೆಂದರೆ ಈ ಗಡಿಯಾರವನ್ನೇ ತೋರಿಸುವಷ್ಟು ಇದು ಖ್ಯಾತಿ ಪಡೆದಿತ್ತು. ರಸ್ತೆಯಲ್ಲಿ ಹೋಗಿ ಬರುವ ಪ್ರವಾಸಿಗರೂ ಸಹ ಇದರ ಪೋಟೋ ಕ್ಲಿಕ್ಕಿಸಿ ಹೋಗುತ್ತಿದ್ದರು. ಆರಂಭದಲ್ಲಿ ಗೋಪುರದ ನಾಲ್ಕೂ ಕಡೆ ಗಡಿಯಾರ ಹಾಗೂ ಮಧ್ಯದಲ್ಲಿ ಚಿನ್ನದ ಬಳೆ ಮಾದರಿ ಹೊಂದಿ ಗೋಪುರದ ತುದಿಯಲ್ಲಿ ಬೃಹತ್ ಚೆಂಡು ನಿರ್ಮಿಸಿದ್ದರಿಂದ ಬಹಳ ಆಕರ್ಷಣೀಯವಾಗಿತ್ತು. 2002ರಲ್ಲಿ ₹7-8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಗಡಿಯಾರದ ಗೋಪುರ ಸಮರ್ಪಕ ನಿರ್ವಹಣೆ ಹೊಂದಿರಲಿಲ್ಲ. ಗೋಪುರದ ಗಡಿಯಾರವನ್ನು ಒಂದೆರಡು ಬಾರಿ ರಿಪೇರಿ ಮಾಡಿದ್ದರೂ ಸಹ ಕೊನೆಗೆ ಇದು ಹಾಳಾಗಿದ್ದರೂ ರಿಪೇರಿಯ ಗೋಜಿಗೆ ಹೋಗಿಲ್ಲ. ನಂತರ ಗೋಪುರವೂ ಸಹ ನಿರ್ವಹಣೆ ಇಲ್ಲದೇ ಹಾಗೇ ಇತ್ತು. ಪುರಸಭೆಯವರೂ ಸಹ ಇದರ ನಿರ್ವಹಣೆಯ ಗೋಜಿಗೇ ಹೋಗಿಲ್ಲ. ಮುಖ್ಯವೃತ್ತದ ಹೆದ್ದಾರಿಯಲ್ಲೇ ಇದನ್ನು ನಿರ್ಮಿಸಿದ್ದರಿಂದ ಇಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುವಂತಾಗಿ ಅಪಘಾತ ತಡೆಯಲು ಸಹಾಯಕವಾಗಿತ್ತು. ವಿಶೇಷವೆಂದರೆ ಈ ಗಡಿಯಾರದ ಗೋಪುರ ವಿವಿಧ ಪಕ್ಷದ ಎಷ್ಟೋ ಪ್ರತಿಭಟನೆ, ಮುಖಂಡರ ಭಾಷಣ, ಜಾಗೃತಿ ಜಾಥಾ, ಕ್ರೀಡಾ ವಿಜಯೋತ್ಸವ ಸೇರಿದಂತೆ ಸಾವಿರಾರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಭಟ್ಕಳ ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಶನಿವಾರ ಗಡಿಯಾರದ ಗೋಪುರವ ಜೆಸಿಬಿ ಯಂತ್ರದ ಸಹಾಯದಿಂದ ನೆಲಸಮ ಮಾಡಲಾಗಿದೆ. ಇದೀಗ ಭಟ್ಕಳ ವೃತ್ತದಲ್ಲಿ ಗಡಿಯಾರದ ಗೋಪುರ ಇಲ್ಲವಾಗಿದ್ದು, 24 ವರ್ಷದ ಹಿಂದೆ ನಿರ್ಮಿಸಲಾದ ಗೋಪುರ ಇನ್ನು ಮುಂದೆ ಕೇವಲ ನೆನಪು ಮಾತ್ರ ಎನ್ನುವಂತಾಗಿದೆ. ಶನಿವಾರ ಸಂಜೆ ಗೋಪುರವನ್ನು ತೆರವುಗೊಳಿಸುವ ಸಂದರ್ಭ ವೃತ್ತದ ಆಸುಪಾಸಿನಲ್ಲಿ ನೂರಾರು ಜನರು ನಿಂತು ವೀಕ್ಷಿಸಿದರು.