ಭಟ್ಕಳ ಮೈನಾರಿಟಿ ಹಾಸ್ಟೆಲ್ ದಾಂಧಲೆ ಪ್ರಕರಣ

| Published : Jan 07 2024, 01:30 AM IST / Updated: Jan 07 2024, 05:09 PM IST

ಸಾರಾಂಶ

ಭಟ್ಕಳ ಪಟ್ಟಣದ ಆನಂದಾಶ್ರಮ ಕಾನ್ವೆಂಟ್ ಸನಿಹದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ (ಮೈನಾರಿಟಿ ಹಾಸ್ಟೆಲ್) ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, ವಾರ್ಡ್‌ನ್‌ಗೆ ನೋಟಿಸ್‌ ನೀಡಲಾಗಿದೆ..

ಭಟ್ಕಳ:ಪಟ್ಟಣದ ಆನಂದಾಶ್ರಮ ಕಾನ್ವೆಂಟ್ ಸನಿಹದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ (ಮೈನಾರಿಟಿ ಹಾಸ್ಟೆಲ್) ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ, ವಾರ್ಡ್‌ನ್‌ಗೆ ನೋಟಿಸ್‌ ನೀಡಲಾಗಿದೆ.

ಶನಿವಾರ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಎಫ್‌.ಯು. ಪೂಜಾರ ವಸತಿ ನಿಯಲಯಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರಲ್ಲದೇ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.ಆನಂತರ ಮಾತನಾಡಿದ ಅವರು, ಡಿ. 31 ರಾತ್ರಿ 11.30ರಿಂದ 11.50 ನಡುವಿನ ಅವಧಿಯಲ್ಲಿ ನಮ್ಮ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಕೀ ಹಾಕಿದ್ದರೂ ಕೂಡ ವಾರ್ಡನ್ ಗಮನಕ್ಕೆ ಬಾರದೆ ಹೊರಗೆ ಹೋಗಿದ್ದಾರೆ. 

ಈ ವೇಳೆ ಅಲ್ಲೇ ಹೊರಗಡೆ ಇದ್ದ ಮದ್ಯಪಾನ ಮಾಡಿದ ಮೂವರ ಗುಂಪಿಗೂ ಮತ್ತು ವಿದ್ಯಾರ್ಥಿಗಳಿಗೂ ವಾಗ್ವಾದ ನಡೆದಿದೆ. ನಂತರ ಅವರು ಮೂವರು ವಿದ್ಯಾರ್ಥಿಗಳನ್ನು ವಸತಿ ನಿಲಯದವರೆಗೆ ಬಂದು ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಓರ್ವ ವಿದ್ಯಾರ್ಥಿ ವಸತಿ ನಿಲಯದ ಒಳಗೆ ಬಂದು ಇನ್ನುಳಿದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾನೆ. 

ನಂತರ ಎಲ್ಲ ವಿದ್ಯಾರ್ಥಿಗಳು ವಸತಿ ನಿಲಯದ ಗೇಟ್ ತೆರೆದು ಮತ್ತೆ ಆವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದರು.ಬಳಿಕ ಮದ್ಯಪಾನ ಮಾಡಿದ ಮೂವರ ಗುಂಪು ವಸತಿ ನಿಲಯದ ಒಳಗೆ ಬಂದು ಬಾಗಿಲು ಬಡಿದು ಒಳ ನುಗ್ಗಿ ಓರ್ವ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ವಿಷಯ ತಿಳಿದು ಅಲ್ಪಸಂಖ್ಯಾತರ ತಾಲೂಕಾಧಿಕಾರಿ ಭೇಟಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅದೇ ದಿನ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಯಾವುದೇ ಮಾಹಿತಿ ನೀಡದೆ ವಸತಿ ನಿಲಯದಿಂದ ಹೊರಗೆ ಹೋಗಿದ್ದ ಮೂವರು ವಿದ್ಯಾರ್ಥಿಗಳನ್ನು ಕೂಡ ವಸತಿ ನಿಲಯದಿಂದ ಅಮಾನತು ಮಾಡಿ ಅವರ ಮೇಲೆ ಕ್ರಮ ಕೈಗೊಂಡಿದ್ದೇವೆ ಎಂದರು.

ಈ ಘಟನೆ ನಡೆಯಲು ಕಾರಣವೇನೆಂದು ಪ್ರಶ್ನಿಸಿ ವಸತಿ ನಿಲಯದ ವಾರ್ಡನ್‌ಗೂ ಕೂಡ ನೋಟೀಸ್‌ ನೀಡಿದ್ದೇನೆ. ಅವರಿಂದ ಉತ್ತರ ಬಂದ ಬಳಿಕ ನಮ್ಮ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ. ವಸತಿ ನಿಲಯದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.