ಸಾರಾಂಶ
ರಾಜ್ಯದ ನಗರ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಿಂದ ಭಟ್ಕಳ ಪುರಸಭೆ ಹಾಗೂ ಜಾಲಿ ಪಪಂ ಒಳಚರಂಡಿ ಕಾಮಗಾರಿಗಾಗಿ ಹಂಚಿಕೆಯಾದ ಅನುದಾನಕ್ಕೆ ಪಟ್ಟಣದ ಪುರಸಭೆ ಸಭಾಭವನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶೈಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಯಾಯೋಜನೆ ಮಾಡಲಾಯಿತು.
ಭಟ್ಕಳ: ರಾಜ್ಯದ ನಗರ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಿಂದ ಇಲ್ಲಿನ ಪುರಸಭೆ ಹಾಗೂ ಜಾಲಿ ಪಪಂ ಒಳಚರಂಡಿ ಕಾಮಗಾರಿಗಾಗಿ ಹಂಚಿಕೆಯಾದ ಅನುದಾನಕ್ಕೆ ಸಂಬಂಧಪಟ್ಟು ಪಟ್ಟಣದ ಪುರಸಭೆ ಸಭಾಭವನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಶೈಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರಿಯಾಯೋಜನೆ ಮಾಡಲಾಯಿತು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಪಂಪ್ ಹೌಸ್ ನಿರ್ಮಾಣ ಘಟಕಕ್ಕೆ ಹಂಚಿಕೆಯಾದ ₹82 ಲಕ್ಷ ಮೊತ್ತವನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಮೊಹತೆಶ್ಯಾಂ ಸಲಹೆ ಮೇರೆಗೆ, ಗೌಸೀಯಾ ಸ್ಟ್ರೀಟ್‌ನ ತ್ಯಾಜ್ಯ ಪಂಪಿಂಗ್ ಹೌಸ್‌ನಲ್ಲಿ 80 ಎಚ್‌ಪಿ ಸಾಮರ್ಥ್ಯದ 2 ಪಂಪ್ ಹಾಗೂ 50 ಎಚ್‌ಪಿ ಸಾಮರ್ಥ್ಯವುಳ್ಳ 2 ಪಂಪ್ ಅಳವಡಿಸಿ, ಶುದ್ಧೀಕರಣ ಹಾಗೂ ನಿರ್ಮಲೀಕರಣ ಘಟಕ ಸ್ಥಾಪಿಸಲು ಸೂಚಿಸಲಾಯಿತು. ನಾಲಾಗಳಲ್ಲಿ ಹರಿಯುವ ತ್ಯಾಜ್ಯವನ್ನು ಶುದ್ಧೀಕರಣ ಮಾಡಲು, ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ₹3.5 ಕೋಟಿ ಅನುದಾನವಿದ್ದು, ಅದನ್ನು ಪುರಸಭೆ ವ್ಯಾಪ್ತಿಯಲ್ಲಿ ಹೊಸ ಮ್ಯಾನ್‌ಹೋಲ್ ಲೈನ್, ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಬಳಸಿಕೊಳ್ಳಬಹುದಾಗಿದ್ದು, ಪುರಸಭೆಯ ಪರಿಸರ ಅಭಿಯಂತರು ಹಾಗೂ ಒಳಚರಂಡಿ ನೀರು ಸರಬರಾಜು ಅಭಿಯಂತರರು ಪರಿಶೀಲನೆ ನಡೆಸಿ, ಅಗತ್ಯ ಇರುವ ಕಡೆ ಮರುನಿರ್ಮಾಣಕ್ಕೆ ಕ್ರಿಯಾಯೊಜನೆ ರೂಪಿಸುವಂತೆ ಯೋಜನಾಧಿಕಾರಿ ಶೈಲಾ ವರ್ಗಿಸ್ ಸೂಚಿಸಿದರು. ಜಾಲಿ ಪಪಂ ಒಳಚರಂಡಿ ಕಾಮಗಾರಿಗಾಗಿ ₹6.46 ಕೋಟಿ ಅನುದಾನ ಬಂದಿದೆ ಎಂದು ಯೋಜನಾಧಿಕಾರಿ ಶೈಲಾ ವರ್ಗಿಸ್ ತಿಳಿಸಿದಾಗ, ಜಾಲಿ ಪಪಂ ಉಪಾಧ್ಯಕ್ಷ ಇಮ್ರಾನ ಲಂಕಾ ಮಾತನಾಡಿ, ಜಾಲಿ ಪಪಂ ವ್ಯಾಪ್ತಿಯಲ್ಲಿ ಹೊಸದಾಗಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಆದ ಹಾಗೆ ಜಾಲಿ ವ್ಯಾಪ್ತಿಯಲ್ಲಿ ಆದರೆ ನಮಗೆ ಅದರ ನಿರ್ವಹಣೆ ಕಷ್ಟವಾಗುತ್ತದೆ. ಯೋಜನೆ ಸಮರ್ಪಕ ಅನುಷ್ಠಾನವಾಗಬೇಕು. ಆ ನಿಟ್ಟಿನಲ್ಲಿ ಸದಸ್ಯರ, ಪರಿಣತರ ಸಲಹೆ ಪಡೆದು, ಕ್ರಿಯಾಯೋಜನೆ ಮಾಡಿ ಎಂದರು.ಪುರಸಭೆ ಅಧ್ಯಕ್ಷ ಅಲ್ತಾಫ ಖರೂರಿ, ಜಾಲಿ ಪಪಂ ಅಧ್ಯಕ್ಷೆ ಅಪ್ಸಾ ಖಾಜಿಯಾ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ ಎನ್., ನೀರು ಹಾಗೂ ಒಳಚರಂಡಿ ಸರಬರಾಜು ಇಲಾಖೆ ಅಭಿಯಂತರ ಸದಾನಂದ ಬಾಂದೇಕರ, ಅಜಯ, ಪುರಸಭೆ ಅಭಿಯಂತರ ಅರವಿಂದ, ಪರಿಸರ ಅಭಿಯಂತರ ವೆಂಕಟೇಶ ನಾವಡ ಮುಂತಾದವರಿದ್ದರು.