ಭಟ್ಕಳ ಪುರಸಭೆ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಪುನರ್ ಪರಿಶೀಲಿಸಲಿ

| Published : Aug 17 2025, 02:44 AM IST

ಭಟ್ಕಳ ಪುರಸಭೆ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಪುನರ್ ಪರಿಶೀಲಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ಪುರಸಭೆಯನ್ನು ಅವೈಜ್ಞಾನಿಕವಾಗಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

ಭಟ್ಕಳ: ಇಲ್ಲಿನ ಭಟ್ಕಳ ಪುರಸಭೆಯನ್ನು ಅವೈಜ್ಞಾನಿಕವಾಗಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಪುರಸಭೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಪುನರ್‌ಪರಿಶೀಲಿಸುವಂತೆ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಧ್ವನಿ ಎತ್ತಿ ಒತ್ತಾಯ ಮಾಡಬೇಕೆಂದು ಭಟ್ಕಳದ ಬಿಜೆಪಿ ನಿಯೋಗ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಆಗ್ರಹಿಸಿತು.

ಭಟ್ಕಳ ಪುರಸಭೆಯ ಗಡಿಗೆ ಹೊಂದಿಕೊಂಡು ಹೆಚ್ಚಿನ ಜನಸಾಂದ್ರತೆ, ಹೆಚ್ಚಿನ ಸಂಖ್ಯೆಯ ವಾಣಿಜ್ಯ ಸಂಕೀರ್ಣ, ಹೆಚ್ಚಿನ ಆದಾಯ ಮೂಲ, ಅಭಿವೃದ್ಧಿ ಹೊಂದಿದ ಮೂಲಭೂತ ಸೌಕರ್ಯ, ಕೈಗಾರಿಕಾ ವಸಾಹತು ಹಾಗೂ ಮೀನುಗಾರಿಕಾ ಬಂದರು ಮತ್ತು ಉದ್ಯಮಗಳು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ನಿಲ್ದಾಣಗಳಿರುವ ಮುಟ್ಟಳ್ಳಿ, ಯಲ್ವಡಿಕವೂರ, ಮುಂಡಳ್ಳಿ, ಮಾವಿನಕುರ್ವಾ, ಶಿರಾಲಿ ಗ್ರಾಮ ಪಂಚಾಯತ್‌ನ ಹಲವು ಗ್ರಾಮಗಳು ನಗರಸಭೆಗೆ ಸೇರ್ಪಡಿಸಲು ಭೌಗೋಳಿಕವಾಗಿ ಹಾಗೂ ವೈಜ್ಞಾನಿಕವಾಗಿ ಅರ್ಹತೆ ಹೊಂದಿದೆ. ಈ ಗ್ರಾಮಗಳನ್ನು ಪರಿಗಣಿಸದೇ ಕೇವಲ ಅಲ್ಪಸಂಖ್ಯಾತರ ಬಾಹುಳ್ಯದ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಜೊತೆಗೆ ಅತೀ ಹೆಚ್ಚು ಕೃಷಿ ಭೂಮಿ ಹೊಂದಿರುವ ಸಂಪೂರ್ಣ ಹೆಬಳೆ ಗ್ರಾಮ ಪಂಚಾಯತಿಯನ್ನು ಸೇರಿಸಿ ಯಾವುದೇ ವೈಜ್ಞಾನಿಕ ಅಧ್ಯಯನ ನಡೆಸದೇ ಹಾಗೂ ಸಾಮಾಜಿಕ ನ್ಯಾಯ ಪರಿಗಣಿಸದೇ ಒಂದು ಕೋಮಿನ ಆಡಳಿತ ಚುಕ್ಕಾಣಿ ಹಿಡಿಯಲು ಅನುಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತರಾತುರಿಯಲ್ಲಿ ನಗರಸಭೆ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ.

ಅಧಿವೇಶನದಲ್ಲಿ ಪ್ರಸ್ತುತ ನಗರಸಭೆಯ ಅವೈಜ್ಞಾನಿಕ ಪ್ರಸ್ತಾವನೆ ತಡೆ ಹಿಡಿದು, ಸಾಮಾಜಿಕ ನ್ಯಾಯದೊಂದಿಗೆ ಮರುಪರಿಶೀಲಿಸಿ, ವೈಜ್ಞಾನಿಕವಾಗಿ ಸಮಗ್ರ ಪ್ರಾದೇಶಿಕ ಅಧ್ಯಯನ ಮಾಡಿ, ಈ ಮೇಲೆ ಪ್ರಸ್ತಾಪಿಸಲಾದ ೫ ಗ್ರಾಮ ಪಂಚಾಯತಿಗಳಲ್ಲಿ ನಗರಸಭೆಗೆ ಸೇರಲು ಅರ್ಹತೆ ಹೊಂದಿರುವ ಗ್ರಾಮಗಳನ್ನು ಸೇರಿಸಿ ಹೊಸದಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಬಿಜೆಪಿ ಮುಖಂಡರು ಬಿವೈ ವಿಜಯೇಂದ್ರ ಮತ್ತಿತರ ನಾಯಕರಿಗೆ ಮನವಿ ಮಾಡಿದರು.

ನಿಯೋಗದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷ ಉಮೇಶ ನಾಯ್ಕ ಇದ್ದರು.