Bheemasamudra APMC Yard: A Hub of Disarray

ರೈತರಿಗೆ ಮೂಲಸೌಕರ್ಯಗಳೇ ಇಲ್ಲ । ಸ್ವಚ್ಛತೆ, ಭದ್ರತೆ ಇಲ್ಲಿ ಮರೀಚಿಕೆ। ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಐತಿಹಾಸಿಕವಾಗಿ ಅಡಿಕೆ ನಾಡು, ಕಬ್ಬಿಣದ ಗಣಿ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಯಾರ್ಡ್ ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ. ಅಡಿಕೆ ಮಾರುಕಟ್ಟೆಗೆ ಹೆಸರು ಮಾಡಿದ್ದ ಟ್ಟೆ ಪ್ರಾಂಗಣ ಮೂಲಸೌಕರ್ಯಗಳ ಕೊರತೆ, ಸ್ವಚ್ಛತೆಯ ಅಭಾವ, ಭದ್ರತಾ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆಗುಂದಿದೆ.

ಸುಮಾರು ಐದಾರು ವರ್ಷಗಳ ಹಿಂದೆ ನಿತ್ಯ ನೂರಾರು ರೈತರು ಅಡಿಕೆ ಚೀಲಗಳೊಂದಿಗೆ ಮಾರುಕಟ್ಟೆಗೆ ಆಗಮಿಸಿ, ಟೆಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದರು. ಆದರೆ ಇಂದು ಮಾರುಕಟ್ಟೆಗೆ ಅಡಿಕೆ ಚೀಲಗಳ ಆಗಮನವೇ ಗಣನೀಯವಾಗಿ ಕಡಿಮೆಯಾಗಿದ್ದು, ಯಾರ್ಡ್ ಬಿಕೋ ಎನ್ನುತ್ತಿದೆ. ಹಿಂದಿನ ವೈಭವ ಈಗಿಲ್ಲ: 2015ರ ಸಮಯದಲ್ಲಿ ಭೀಮಸಮುದ್ರ ಮಾರುಕಟ್ಟೆಗೆ ಅಡಿಕೆ ಮಾರಾಟಕ್ಕೆ ಬರುತ್ತಿದ್ದ ದಿನಗಳನ್ನು ಸ್ಮರಿಸಿದ ಹೊಳಲ್ಕೆರೆ ತಾಲೂಕಿನ ರೈತ ಮಧುಕೇಶವ, ಸೋಮವಾರ ಮಾರುಕಟ್ಟೆ ಇದೆ ಎಂದರೆ ಭಾನುವಾರ ಮಧ್ಯಾಹ್ನವೇ ಮನೆಯಿಂದ ಹೊರಟು ಬಸ್‌ಗಳಲ್ಲಿ ಅಡಿಕೆ ಚೀಲಗಳನ್ನು ಹಾಕಿಕೊಂಡು ಬರುತ್ತಿದ್ದೆವು. ಮಾರುಕಟ್ಟೆ ತಲುಪಲು ಒಂದು ದಿನವೇ ಬೇಕಾಗುತ್ತಿತ್ತು. ಬೇಗ ಬಂದರೆ ಟೆಂಡರ್ ಪ್ರಕ್ರಿಯೆ ಬೇಗ ಮುಗಿಯುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದೆವು. ಆದರೆ ಈಗ ಮಾರುಕಟ್ಟೆಗೆ ಅಡಿಕೆ ಚೀಲಗಳೇ ಬರುತ್ತಿಲ್ಲ. ಮಂಡಿಗಳಲ್ಲಿ ಸಾಲ ಮಾಡಿರುವುದರಿಂದ ಅನಿವಾರ್ಯವಾಗಿ ಇಲ್ಲಿಗೆ ಬರುತ್ತಿದ್ದೇವೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.ರೈತರ ಬೆಳೆಗೆ ಭದ್ರತೆಯೇ ಇಲ್ಲ: ಎಪಿಎಂಸಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ನಿತ್ಯ ನೂರಾರು ಖಾಸಗಿ ವಾಹನಗಳು ಸಂಚರಿಸುವ ಮಾರುಕಟ್ಟೆಯಲ್ಲಿ ರೈತರು ಮುಂಜಾನೆ 4 ಗಂಟೆಗೆ ಬಂದು ಕಾಯುತ್ತಿದ್ದರೂ, ಮಂಡಿಗಳ ಬಾಗಿಲು ತೆರೆಯುವುದು ಬೆಳಗ್ಗೆ 8ರಿಂದ 9 ಗಂಟೆಯಾಗುತ್ತದೆ. ಈ ಅವಧಿಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ತಾವೇ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಮುಖ್ಯ ದ್ವಾರದಲ್ಲಾಗಲಿ, ಕಚೇರಿಯಲ್ಲಾಗಲಿ ಮಾಹಿತಿ ನೀಡಲು ಸಿಬ್ಬಂದಿ ಲಭ್ಯವಿರುವುದಿಲ್ಲ ಎಂಬುದು ರೈತರ ಆರೋಪ.

ದೂರದ ಊರುಗಳಿಂದ ಅಡಿಕೆ ಮಾರಾಟಕ್ಕೆ ಬರುವ ರೈತರಿಗೆ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ. ವಿಶ್ರಾಂತಿ ಪಡೆಯಲು ಕೊಠಡಿ, ಶೌಚಾಲಯ ಹಾಗೂ ಊಟ-ತಿಂಡಿಗೆ ಕ್ಯಾಂಟೀನ್ ವ್ಯವಸ್ಥೆ ಇಲ್ಲದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಪಾವಗಡ ತಾಲ್ಲೂಕಿನ ರೈತ ವರದರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರಿಂದ ದುರ್ವಾಸನೆ ಹರಡುತ್ತಿದ್ದು, ಪ್ರತಿನಿತ್ಯ ನೂರಾರು ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ, ಸಂಜೆ ವೇಳೆ ಎಪಿಎಂಸಿ ಆವರಣದಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳನ್ನು ಒಡೆದು ಹಾಕುತ್ತಿರುವುದರಿಂದ ಪರಿಸರ ಹಾಳಾಗುವುದರ ಜತೆಗೆ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ಎಪಿಎಂಸಿ ಆವರಣದಲ್ಲಿರುವ ಗೋದಾಮುಗಳನ್ನು ಸಿಮೆಂಟ್, ಗೊಬ್ಬರ ವ್ಯಾಪಾರಿಗಳು ಹಾಗೂ ಶಾಮಿಯಾನ ಪೂರೈಕೆದಾರರಿಗೆ ಬಾಡಿಗೆ ನೀಡಲಾಗಿದೆ. ಆದರೆ ಗೋದಾಮುಗಳ ಸುತ್ತ ಗಿಡಗಂಟಿಗಳು ಬೆಳೆದು ನಿರ್ವಹಣೆಯಿಲ್ಲದೆ ಪಾಳುಬಿದ್ದಂತಿವೆ. ಈ ಘಟಕಗಳಿಂದ ವಸೂಲಾಗುತ್ತಿರುವ ಬಾಡಿಗೆ ಹಣದ ವಿವರಗಳೂ ಸಾರ್ವಜನಿಕರಿಗೆ ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೇರೆ ರಾಜ್ಯದ ಲಾರಿಯೊಂದು ಕಳೆದ ಒಂದರಿಂದ ಎರಡು ವರ್ಷಗಳಿಂದ ಮಾರುಕಟ್ಟೆ ಆವರಣದಲ್ಲೇ ನಿಂತಿದ್ದು, ಅದನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ. ಮತ್ತೊಂದೆಡೆ, ಎಪಿಎಂಸಿ ಆವರಣದ ಗೋಡೆ ಕುಸಿದಿರುವುದು ಹಾಗೂ ಮಳೆನೀರು ಹರಿದುಹೋಗುವ ವ್ಯವಸ್ಥೆಯ ಅವ್ಯವಸ್ಥೆಯಿಂದ ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಮಣ್ಣಿನ ಸವಕಳಿ ಉಂಟಾಗಿ ಬೆಳೆಗಳಿಗೆ ಹಾನಿಯಾಗುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಅಡಿಕೆ ತೋಟದ ಮಾಲೀಕ ಸಿದ್ದೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂ ಇಲಾಖೆಯ ವತಿಯಿಂದ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂದರ್ಭದಲ್ಲಿ ಹಳೆಯ ಹಾಗೂ ಅರ್ಧ ಮುರಿದ ಕಂಬಗಳನ್ನು ತೆರವುಗೊಳಿಸಿ, ಅವುಗಳಲ್ಲಿನ ಕಬ್ಬಿಣವನ್ನು ತೆಗೆದ ಬಳಿಕ ಉಳಿದ ತ್ಯಾಜ್ಯವನ್ನು ರಸ್ತೆಯ ಮಧ್ಯದಲ್ಲೇ ಬಿಡಲಾಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

----------------

ಪೋಟೋ ಕ್ಯಾಪ್ಸನ್

ಭೀಮಸಮುದ್ರದ ಎಪಿಎಂಸಿ ಮಾರುಕಟ್ಟೆ ಆವರಣ

------ಪೋಟೋ ಫೈಲ್ ನೇಮ್-31ಸಿಟಿಡಿ1--

ಗೋದಾಮುಗಳಿಗೆ ಬೀಗ ಜಡಿಯಲಾಗಿದ್ದು ಆವರಣ ತ್ಯಾಜ್ಯದಿಂದ ತುಂಬಿದೆ.

------ಪೋಟೋ ಪೈಲ್ ನೇಮ್-31 ಸಿಟಿಡಿ 2-