ಭೀಮಾ ಪ್ರವಾಹ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆ

| Published : Aug 07 2024, 01:02 AM IST

ಸಾರಾಂಶ

ಉಜನಿ, ವೀರಭಟ್ಕರ್ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆ ಎರಡು ಬ್ಯಾರೇಜ್‌ಗಳಿಂದ 1.50 ಲಕ್ಷ ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಭೀಮಾ ನದಿ ದಂಡೆಯಲ್ಲಿರುವ ಜನ-ಜಾನುವಾರುಗಳಿಗೆ ಯವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಡಕ್ ಸೂಚನೆ

ಕನ್ನಡಪ್ರಭ ವಾರ್ತೆ ಚವಡಾಪುರ

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಿನ ಉಜನಿ, ವೀರಭಟ್ಕರ್ ಜಲಾಶಯಗಳು ಭರ್ತಿಯಾಗುತ್ತಿರುವ ಹಿನ್ನೆಲೆ ಎರಡು ಬ್ಯಾರೇಜ್‌ಗಳಿಂದ 1.50 ಲಕ್ಷ ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಭೀಮಾ ನದಿ ದಂಡೆಯಲ್ಲಿರುವ ಜನ-ಜಾನುವಾರುಗಳಿಗೆ ಯವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಕಡಕ್ ಆಗಿ ಸೂಚನೆ ನೀಡಿದರು.

ಮಂಗಳವಾರ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಜೊತೆಗೆ ಜಂಟಿಯಾಗಿ ಸೊನ್ನ ಗ್ರಾಮದ ಭೀಮಾ ಏತ ನೀರಾವರಿ ಬ್ಯಾರೇಜ್‌ಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ಹೆಚ್ಚುವರಿ ನೀರನ್ನು ಭೀಮಾ ನದಿಗೆ ಹರಿಬಿಡಲಾಗುತ್ತಿದ್ದು ನಮ್ಮಲ್ಲೂ ಪ್ರವಾಹ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಈಗ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವ ಮಾಹಿತಿ ಇದೆ. ಇದರಿಂದ ಭೀಮಾ ನದಿಯಲ್ಲಿ ಪ್ರವಾಹ ಕಡಿಮೆಯಾಗುವ ಸಾದ್ಯತೆ ಇದೆ. ಅಲ್ಲಿನ ಜಲಾಶಯಗಳಿಂದ ಬರುವ ನೀರಿನ ಪ್ರಮಾಣ ನೋಡಿಕೊಂಡು ಮುಂದೆ ನಮ್ಮಲ್ಲಿನ ಜಲಾಶಯಗಳಲ್ಲಿ ಎಷ್ಟು ಪ್ರಮಾಣದ ನೀರು ಹಿಡಿದಿಟ್ಟುಕೊಳ್ಳಬೇಕು, ಎಷ್ಟು ಹೊರ ಬಿಡಬೇಕೆನ್ನುವುದನ್ನು ಚಿಂತಿಸಲಾಗುತ್ತದೆ ಎಂದ ಅವರು, ನದಿ ದಂಡೆಯಲ್ಲಿನ ಊರುಗಳ ಜನಸಾಮಾನ್ಯರು ಜಾಗೃತಿ ವಹಿಸುವುದು ಬಹಳ ಅವಶ್ಯಕತೆ ಇದೆ. 2020ರಲ್ಲಿ ಬಂದಿದ್ದ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಹಾನಿ ಆಗಿತ್ತು. ಈ ಬಾರಿ ಅಂತಹ ಹಾನಿಯಾಗಲು ಆಸ್ಪದ ನೀಡದಂತೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.

ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಉಜನಿ ಜಲಾಶಯದಿಂದ 1.3 ಲಕ್ಷ ಕ್ಯುಸೆಕ್‌ ನೀರು, ವೀರಭಟ್ಕರ್ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರು ಭೀಮಾ ನದಿಗೆ ಹರಿದು ಬರುತ್ತಿದೆ. ವಿಜಯಪುರ ಜಿಲ್ಲೆಯಲ್ಲೂ ಪ್ರವಾಹ ಭೀತಿ ಎದುರಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಎರಡು ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನ ಆತಂಕ ಪಡುವ ಅಗತ್ಯವಿಲ್ಲ. ಆದರೆ, ವಿನಾಕಾರಣ ನದಿ ಪಾತ್ರಕ್ಕೆ ಹೋಗುವುದು ಉಚಿತವಲ್ಲ ಎಂದು ಎಚ್ಚರಿಕೆ ನೀಡಿದರು.

ಬಳಿಕ ಇಬ್ಬರೂ ಜಿಲ್ಲಾಧಿಕಾರಿಗಳು ಸೊನ್ನ ಬ್ಯಾರೇಜ್‌ನ ಗೇಟ್‌ಗಳು ಯಾವ ಪರಿಸ್ಥಿತಿಯಲ್ಲಿವೆ? ಅವುಗಳ ಸ್ಥಿತಿಗತಿಗಳು ಹೇಗಿವೆ ಎನ್ನುವುದರ ಕುರಿತು ಬ್ಯಾರೇಜ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಭೀಮಾ ಏತ ನೀರಾವರಿ ನಿಗಮದ ಎಇಇ ಸಂತೋಷಕುಮಾರ ಸಜ್ಜನ್ ಅವರು ಬ್ಯಾರೇಜ್‌ನ ಗೇಟ್‌ಗಳ ಸುರಕ್ಷತೆ ಬಗ್ಗೆ ಮತ್ತು ಮಹಾರಾಷ್ಟ್ರದಿಂದ ಬರುತ್ತಿರುವ ನೀರನ್ನು ಹೇಗೆ ಹಿಡಿದಿಟ್ಟುಕೊಳ್ಳಲಾಗುತ್ತಿದೆ, ಹೇಗೆ ಹೊರಬಿಡಲಾಗುತ್ತಿದೆ ಎನ್ನುವುದರ ಕುರಿತು ಇರ್ವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಅಧಿಕಾರಿಗಳಾದ ರಾಮಚಂದ್ರ ಗಡದೆ, ಸೂರ್ಯಕಾಂತ ಮಾಲೆ, ಸಮದ್ ಪಟೇಲ್, ಸಂಜೀವಕುಮಾರ ದಾಸರ, ಸುರೇಶ್ ಚವಾಲ್, ಈರಣ್ಣ ಕೌಲಗಿ, ಎಫ್.ಎಚ್. ಪಠಾಣ, ಎಸ್.ಎಚ್. ಗಡಗಿಮನಿ, ಗುರುಲಿಂಗಪ್ಪ ಪಾಣೇಗಾಂವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.