ಮಹಾರಾಷ್ಟ್ರದ ಉಜನಿ ಹಾಗೂ ನೀರಾ ಜಲಾಶಯಗಳಿಂದ 26,000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

 ವಿಜಯಪುರ : ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಹಾರಾಷ್ಟ್ರದ ಉಜನಿ ಹಾಗೂ ನೀರಾ ಜಲಾಶಯಗಳಿಂದ 26,000 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. 

ಭೀಮಾನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿನ ಎರಡು ಬ್ಯಾರೇಜ್ ಗಳು ಜಲಾವೃತವಾಗಿವೆ. ಚಡಚಣ ತಾಲೂಕಿನ ಉಮರಜ-ಭಂಡಾರಕವಟೆ ಬ್ಯಾರೇಜ್ ಹಾಗೂ ಶಿರನಾಳ- ಅವಜಿ ಬ್ಯಾರೇಜ್‌ಗಳು ಜಲಾವೃತವಾಗಿವೆ.

ಬ್ಯಾರೇಜ್ ಮೂಲಕ ಹೊಂದಿದ್ದ ಮಹಾರಾಷ್ಟ್ರ ಸಂಪರ್ಕ ಕಡಿತವಾಗಿದೆ. ಗಡಿ ಭಾಗದಿಂದ ಮಹಾರಾಷ್ಟ್ರಕ್ಕೆ ಹೋಗಬೇಕಾದರೆ ಇಲ್ಲಿನ ಜನರು ಸುತ್ತುವರಿದು ಬೇರೆ ಮಾರ್ಗದ ಮೂಲಕ ತೆರಳುವಂತಾಗಿದೆ. ನದಿ ತಟದಲ್ಲಿ ಜನರು ಜಾಗೃತೆಯಿಂದ ಇರಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ. ಚಡಚಣ, ಇಂಡಿ, ಆಲಮೇಲ ತಾಲೂಕಿನ ಭಾಗದಲ್ಲಿ ನದಿ ತೀರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಆಯಾ ತಾಲೂಕು ಆಡಳಿತಗಳು ತಿಳಿಸಿವೆ.

ಮೇ ತಿಂಗಳಲ್ಲೇ ಉಕ್ಕಿದ ಭೀಮೆ:

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿಯೇ ನೀರು ಉಕ್ಕಿ ಹರಿದಿದೆ. ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಬಳಿ ಹರಿಯುತ್ತಿರುವ ಭೀಮೆಯು ಉಕ್ಕಿ ಭೋರ್ಗರೆಯುತ್ತಿದ್ದಾಳೆ. ಮೇ ತಿಂಗಳಿನಲ್ಲಿಯೇ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಈ ಭಾಗದ ರೈತರಲ್ಲಿ ಸಂತಸ ಮೂಡಿದೆ. ಇನ್ನೊಂದೆಡೆ ನದಿ ತೀರದ ರೈತರಿಗೆ ಪಂಪಸೆಟ್‌ಗಳಿಗೆ ಹಾಗೂ ವಿದ್ಯುತ್‌ಗೆ ತೊಂದರೆಗಳು ಉಂಟಾಗಿವೆ.

ಭೀಮಾ ನದಿಯಲ್ಲಿ ಏಕಾಏಕಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನದಿ ದಡದಲ್ಲಿ ಅಳವಡಿಸಲಾಗಿದ್ದ ಅನೇಕ ರೈತರ ನೂರಾರು ಪಂಪ್‌ಸೆಟ್‌ಗಳು, ಪೈಪ್‌ಲೈನ್‌ಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದಾಗಿ ಬೀಮೆ ತುಂಬಿದ ಸಂತಸ ಒಂದೆಡೆ ಇದ್ದರೆ, ಪಂಪಸೆಟ್‌ಗಳು ಕೊಚ್ಚಿಕೊಂಡು ಹೋಗಿದ್ದರಿಂದ ಹಾನಿಯಾಗಿದೆ. ಸರ್ಕಾರ ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಬೇಕಿದೆ ಎಂದು ನದಿ ಪಾತ್ರದ ರೈತರಾದ ಸೂರ್ಯಕಾಂತ ಭೈರಗೊಂಡ ತಿಳಿಸಿದ್ದಾರೆ.