ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಣೆ

| Published : Sep 20 2025, 01:00 AM IST

ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಸಂಘಗಳು ಶೋಷಿತ, ಸೌಲಭ್ಯ ವಂಚಿತ ಸಮುದಾಯಗಳನ್ನು ಸಹಕಾರಿ ತತ್ವದ ಮೂಲಕ ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸುವ ದೊಡ್ಡ ವೇದಿಕೆ

ಕನ್ನಡಪ್ರಭ ವಾರ್ತೆ ಮೈಸೂರು

ಭೀಮ ಜ್ಯೋತಿ ಸೌಹಾರ್ಧ ಸಹಕಾರಿಯು 2024-25ನೇ ಸಾಲಿನ 5ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿತ್ತು.

ಸೊಸೈಟಿಯ ವೃತ್ತಿಪರ ನಿರ್ದೇಶಕ ಹಾಗೂ ಚಿಂತಕ ಪ್ರೊ.ಎಚ್. ಗೋವಿಂದಯ್ಯ ಮಾತನಾಡಿ, ಭೀಮ ಜ್ಯೋತಿ ಸೌಹಾರ್ಧ ಸಹಕಾರಿ ಸಂಘವು 5 ವರ್ಷಗಳಿಂದ ಸಹಕಾರಿಯ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಾಘನೀಯ ಎಂದರು.

ಸಹಕಾರಿ ಸಂಘಗಳು ಶೋಷಿತ, ಸೌಲಭ್ಯ ವಂಚಿತ ಸಮುದಾಯಗಳನ್ನು ಸಹಕಾರಿ ತತ್ವದ ಮೂಲಕ ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸುವ ದೊಡ್ಡ ವೇದಿಕೆಯಾಗಿದೆ. ಅವು ಸಹಕಾರಿ ಸಂಘಗಳೇ ಆಗಿವೆ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುನ್ನಡೆಗೆ ತರುವ ಪ್ರೇರಕ ಶಕ್ತಿ ಸಹಕಾರಿ ಕ್ಷೇತ್ರವಾಗಿದೆ ಎಂದು ಅವರು ತಿಳಿಸಿದರು.

ಹಣಬಲ, ಜನಬಲ ನಡುವೆ ಜನಬಲವೇ ಎಂದಿಗೂ ಗೆಲ್ಲುತ್ತದೆ ಎಂದು ಸಹಕಾರಿ ಕ್ಷೇತ್ರವು ಸಾಬೀತುಪಡಿಸಿದೆ. ಸಹಕಾರಿ ಸಂಘಗಳು ಶೋಷಿತ ಸಮುದಾಯಕ್ಕೆ ಹೊಸ ಚೈತನ್ಯ, ಹೊಸ ಬೆಳಕು ನೀಡುವ ಮೂಲಕ ನಾಯಕತ್ವನ್ನು ಬೆಳಸುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದಲ್ಲಿ ಅಂತಹ ಸಂಘಗಳು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಮಹಿಳಾ ಸದಸ್ಯರು ನಿಜಕ್ಕೂ ಸಹಕಾರಿ ಸಂಘಗಳ ಆಧಾರ ಸ್ಥಂಭವಾಗಿದ್ದಾರೆ. ಒಳಮೀಸಲಾತಿ ಜಾರಿಯಾಗಿರುವ ಈ ಸಂದರ್ಭದಲ್ಲಿ ಹೆಚ್ಚೆಚ್ಚು ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಬೆಳೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಭೀಮ ಜ್ಯೋತಿ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉದ್ಘಾಟಿಸಿದರು.

ಪ್ರೊ.ಸಿ. ರಾಮಸ್ವಾಮಿ ಅವರು ಉದ್ಘಾಟನ ಭಾಷಣ ನೆರವೇರಿಸಿದರು. ಮಾಜಿ ಮೇಯರ್ ನಾರಾಯಣ, ಸಾಮಾಜಿಕ ಹೋರಾಟಗಾರ ಅರಕಲವಾಡಿ ನಾಗೇಂದ್ರ, ಬಾಬೂ ಜಗಜೀವನರಾಮ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಸದಾಶಿವ, ಸಭೆಯನ್ನುದ್ದೇಶಿಸಿ ಮಾತನಾಡಿದರು.

ಭೀಮ ಜ್ಯೋತಿ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ವಕೀಲ ಆರ್. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ವೃತ್ತಿಪರ ನಿರ್ದೇಶಕರಾದ ಎಂಜಿನಿಯರ್‌ಎನ್. ಶ್ರೀನಿವಾಸಲು, ಮಾಜಿ ಅಧ್ಯಕ್ಷ ತಿಪ್ಪಯ್ಯ, ನಿರ್ದೇಶಕರಾದ ಸಿ.ಪಿ. ರಂಗಯ್ಯ, ಹನುಮಂತ , ಆನಂದಪ್ಪ, ಎನ್. ಜಯರಾಮ, ಎಂ. ತಿಪ್ಪಯ್ಯ (ಕಿರಣ್), ಮುತ್ತಮ್ಮ, ಮುರುಗೇಶ್, ಆರ್. ದಾಸು, ಆರ್. ಶಿವ, ಆರ್ಟಿಸ್ಟ್‌ ನಾಗರಾಜು, ಸಿಇಒ ಕೆ.ಆರ್. ವಿನುತಾ ಇದ್ದರು.

ಸಂಘದ ಉಪಾಧ್ಯಕ್ಷ ಎನ್. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿರ್ದೇಶಕ ಎನ್. ಲೋಕೇಶ್ ನಿರೂಪಿಸಿದರು. ವಸಂತಮ್ಮ ವಂದಿಸಿದರು.