ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದು ಸಾಹಿತಿ ಡಾ. ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಾವೇರಿ ಉದ್ಯಾನವನದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಆಯೋಜಿಸಿದ್ದ 207ನೇ ವರ್ಷದ ಐತಿಹಾಸಿಕ ಭೀಮಾ ಕೋರೆಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ಭೀಮಾ ಕೋರೆಗಾಂವ್ ಯುದ್ಧ ನಡೆದಿದೆ. ಈ ಯುದ್ಧದ ಗೆಲುವು ಭಾರತ ದೇಶದಲ್ಲಿ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಆತ್ಮಗೌರವ, ಮಹಿಳೆಯರಿಗೆ ಸ್ವಾಭಿಮಾನ ತಂದುಕೊಟ್ಟಿದ್ದಲ್ಲದೇ, ಸಾಮಾಜಿಕ ಬದಲಾವಣೆಗೆ ಹೊಸ ದಿಕ್ಸೂಚಿಯನ್ನೇ ನೀಡಿತು ಎಂದರು.ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ, ಶೋಷಿತ ಸಮುದಾಯ ಮೌಢ್ಯತೆಯಿಂದ ಇನ್ನೂ ಹೊರ ಬಂದಿಲ್ಲ, ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ಮರಣಾರ್ಥ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವೀರ ಮಹರ್ ಸೈನಿಕರಿಗೆ ಮೇಣದ ಬೆಳಕಿನ ನಮನ ಸಲ್ಲಿಸಿದರು. ಇದೇ ವೇಳೆ ವಿಶ್ವಜ್ಞಾನಿ ಬ್ಯಾಂಕ್‌ನ ಕ್ಯಾಲೆಂಡರ್ ಲೋಕಾರ್ಪಣೆಗೊಂಡಿತು.ಕಾರ್ಯಕ್ರಮದಲ್ಲಿ ಸಮಿತಿ ಪದಾಧಿಕಾರಿಗಳಾದ ಹೈಕೋರ್ಟ್ ನ್ಯಾಯವಾದಿ ಎಂ.ಬಿ.ಹರಿಪ್ರಸಾದ್, ವೈದ್ಯ ಡಾ. ಪಿ.ಎಸ್. ರವೀಂದ್ರ ಮೂರ್ತಿ, ಶಿಕ್ಷಕರಾದ ಆಶಾರಾಣಿ, ವಿಶ್ವಜ್ಞಾನಿ ಬ್ಯಾಂಕ್‌ನ ಸಿ.ಬಿ.ಅರುಣಾಕ್ಷಿ, ಪ್ರೊ.ಮಹದೇವನ್, ಮುಕುಂದ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಅಂದಾನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಶಿವಶಂಕರ್, ವಿಚಾರವಾದಿ ವಜ್ರಮುನಿ, ಪರಿವರ್ತನ್ ಸಂಸ್ಥೆ ತಗ್ಗಹಳ್ಳಿ ನಾಗರಾಜ್, ನಿರಂಜನ್ ಬೌದ್ಧ್ ಇದ್ದರು.