ಸ್ವಾಭಿಮಾನದ ಹೋರಾಟವೇ ಭೀಮಾ ಕೊರೆಗಾಂವ್

| Published : Jan 02 2025, 12:30 AM IST

ಸಾರಾಂಶ

ಮಹರಾಷ್ಟ್ರದ ಪೇಶ್ವೆಗಳು ಆಡಳಿತದ ಅವಧಿಯಲ್ಲಿ ಅಲ್ಲಿದ ದಲಿತರಾದ ಮಹರ್ ವಿರುದ್ಧ ಅನಾವಶ್ಯಕವಾಗಿ ಯುದ್ದ ಸಾರಿ ದಲಿತರ ದಮನಕ್ಕೆ ಪ್ರಯತ್ನಿಸಿದರು.

ಕೊಟ್ಟೂರು: ಸ್ವಾಭಿಮಾನ ಮತ್ತು ಆತ್ಮಗೌರವಕ್ಕಾಗಿ ನಡೆದ ಹೋರಾಟವೇ ಭೀಮಾ ಕೊರೆಗಾಂವ್ ಈ ಮೂಲಕ ಪೇಶ್ವೆ ವಿರುದ್ಧ ದಲಿತರು ನಡೆಸಿದ ದೊಡ್ಡಮಟ್ಟದ ಹೋರಾಟದ ವಿಜಯೋತ್ಸವವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದರು.ಪಟ್ಟಣದಲ್ಲಿ ಬುಧವಾರ ದಲಿತ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಭೀಮಾ ಕೊರೆಗಾಂವ್ ವಿಜಯೋತ್ಸವದ ಮೆರವಣಿಗೆಗೆ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಹರಾಷ್ಟ್ರದ ಪೇಶ್ವೆಗಳು ಆಡಳಿತದ ಅವಧಿಯಲ್ಲಿ ಅಲ್ಲಿದ ದಲಿತರಾದ ಮಹರ್ ವಿರುದ್ಧ ಅನಾವಶ್ಯಕವಾಗಿ ಯುದ್ದ ಸಾರಿ ದಲಿತರ ದಮನಕ್ಕೆ ಪ್ರಯತ್ನಿಸಿದರು. ಇದನ್ನು ವಿರೋಧಿಸಿ 500 ದಲಿತ ಸೈನಿಕರು ಒಟ್ಟುಗೂಡಿ ಪೇಶ್ವೆ ಸೈನಿಕರನ್ನು ಸೋಲಿಸಿ ದೊಡ್ಡಮಟ್ಟದ ವಿಜಯ ಸಾಧಿಸಿದ್ದು ಐತಿಹಾಸಿಕ. ಈ ಕಾರಣಕ್ಕಾಗಿ ಭೀಮಾ ಕೊರೆಗಾಂವ್ ವಿಜಯೋತ್ಸವ ಹೆಸರು ಪಡೆದುಕೊಂಡಿತು ಎಂದರು.

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಿ.ಮರಿಸ್ವಾಮಿ ಮಾತನಾಡಿ, ತಮ್ಮ ಹಕ್ಕಿಗಾಗಿ ದಲಿತರು ಮಾನವೀಯ ಮೌಲ್ಯಗಳ ರಕ್ಷಣೆಗಾಗಿ ಭೀಮಾ ಕೊರೆಗಾಂವ್ ಹೋರಾಟ ರಾಷ್ಟ್ರದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು ಎಂದರು.

ಶಿಕ್ಷಕ ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು.

ಪಪಂ ಅಧ್ಯಕ್ಷೆ ಬಿ.ರೇಖಾ ರಮೇಶ, ಸದಸ್ಯ ಟಿ.ಜಗದೀಶ್, ಶೋಭಿತ್, ದಲಿತ ಮುಖಂಡರಾದ ಬಿ.ದುರುಗೇಶ್, ಬುಗ್ಗಳ್ಳಿ ಕೊಟ್ರೇಶ್, ಕೆಂಗರಾಜ, ಟಿ.ಹನುಮಂತಪ್ಪ, ಬಣಕಾರಿ ಕುಮಾರಪ್ಪ, ಟಿ.ಸುರೇಶ್, ಶಿವು, ಬಿ.ಪರಶುರಾಮ್, ಕೊಲ್ಲಾರಿ, ವೀರಭದ್ರಪ್ಪ ದಡಾರಪ್ಪ, ಕೆ.ಶಿವರಾಜ್, ಮಣಿಕಂಠ, ಕಂದಗಲ್ಲು ಪರಶುರಾಮ್, ತಿಮ್ಮಲಾಪುರ ಮೈಲಾಪ್ಪ ಇದ್ದರು.

ನಂತರ ಭೀಮಾ ಕೊರೆಗಾಂವ್ ವಿಜಯೋತ್ಸವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯುದ್ದಕ್ಕೂ ದಲಿತ ಯುವಕ-ಯುವತಿಯರು ಡಿಜೆ ಶಬ್ದದ ಸಂಗೀತಕ್ಕೆ ನೃತ್ಯ ಮಾಡುತ್ತಾ ಸಾಗಿದರು.