ಸಾರಾಂಶ
ಬೃಹತ್ ನೀರಾವರಿ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲವೆಂಬ ಸಾಮಾನ್ಯ ಜ್ಞಾನವೂ ಇವರಿಗೆ ಇಲ್ಲದಾಗಿದೆ.
ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಕೆಲ ಪುಣ್ಯಾತ್ಮರು ಮಾಲವಿ ಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ತಂದಿರುವುದು ಎಂದು ಜ್ಞಾನ ಇಲ್ಲದವರ ತರ ಮಾತನಾಡುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಶಾಸಕ ಕೆ.ನೇಮರಾಜ ನಾಯ್ಕ ವಿರುದ್ಧ ಹರಿಹಾಯ್ದರು.ತಾಲೂಕಿನ ಮಾಲವಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಈ.ತುಕರಾಮ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.
ಬೃಹತ್ ನೀರಾವರಿ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲವೆಂಬ ಸಾಮಾನ್ಯ ಜ್ಞಾನವೂ ಇವರಿಗೆ ಇಲ್ಲದಾಗಿದೆ. ತಾಲೂಕಿನ ಮಾಲವಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನುದಾನ ಒದಗಿಸಿ, ಗೇಟ್‌ಗಳನ್ನು ದುರಸ್ತಿಗೊಳಿಸಿ ನೀರು ತುಂಬಿಸುವ ಕೆಲಸವನ್ನು ನಾನೇ ಮಾಡುತ್ತೇನೆ. ಜಲಾಶಯಕ್ಕೆ ನಾವು ತುಂಬಿಸಿದ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ ಈ ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ. ತುಕಾರಾಂ ಪ್ರಾಮಾಣಿಕ ಸರಳ ರಾಜಕಾರಣಿ. ಇವರು ೨ ಲಕ್ಷ ಮತಗಳ ಅಂತರದಿಂದ ವಿಜೇತರಾಗುತ್ತಾರೆ ಎಂದರು.ಸರ್ವೇ ವರದಿ ಪ್ರಕಾರ ಬಿಜೆಪಿಗೆ ಹಿನ್ನಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಲು ಆರಂಭಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ತುಕಾರಾಂ ಗೆಲುವಿಗೆ ನಿರಂತರವಾಗಿ ಶ್ರಮಿಸೋಣ ಎಂದು ತಿಳಿಸಿದರು.
ಎಸ್.ಭೀಮನಾಯ್ಕ ಭಾಷಣ ಮಾಡುತ್ತಿರುವ ವೇಳೆ ಮಾಲವಿ ಗ್ರಾಮಸ್ಥನೋರ್ವ, "ನೀವು ಮಾಲವಿ ಡ್ಯಾಂಗೆ ನೀರು ತಂದ್ರಿ ಸಾರ್, ಈಗ ಇರುವ ಶಾಸಕರಿಗೆ ಡ್ಯಾಂ ಗೇಟ್‌ಗಳಿಗೆ ವೈಸೇರ್ ಹಾಕೋಕೆ ಆಗುತ್ತಿಲ್ಲ ಸಾರ್ " ಎಂದು ನುಡಿದರು.ಇದೇ ವೇಳೆ ಗ್ರಾಮಸ್ಥರಿಗೆ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಜಿಲ್ಲಾಧ್ಯಕ್ಷೆ ಸಾಹಿರಾಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪ್ರಚಾರ ಸಮಿತಿಯ ಅಧ್ಯಕ್ಷ ನಂದಿಬಂಡಿ ಉಪ್ಪಾರ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯಶೋದಾ ಮಂಜುನಾಥ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಪುರಸಭೆ ಸದಸ್ಯ ಮರಿರಾಮಣ್ಣ, ಮಂಜುನಾಥ, ತ್ಯಾವಣಗಿ ಕೊಟ್ರೇಶ, ಯು.ಬಾಲಪ್ಪ, ತಾಪಂ ಮಾಜಿ ಅಧ್ಯಕ್ಷೆ ನಾಗಮ್ಮ, ಭಾರತಿ, ಮುಖಂಡರಾದ ವಲಿ, ರಫಿಕ್, ಎ.ಸಿದ್ದೇಶ ಇತರರಿದ್ದರು.