ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಬಗ್ಗೆ ಭೀಮಣ್ಣ ಗರಂ

| Published : Nov 17 2025, 01:45 AM IST

ಸಾರಾಂಶ

ನಗರದ ಐದು ರಸ್ತೆ ಸಮೀಪದ ರಾಯಪ್ಪ ಹುಲೇಕಲ್ ಶಾಲಾ ಆವಾರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಇಂದಿರಾ ಕ್ಯಾಂಟೀನ್‌ಗೆ ಭಾನುವಾರ ಬೆಳಗ್ಗೆ ಶಾಸಕ ಭೀಮಣ್ಣ ನಾಯ್ಕ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದರು.

ಕ್ಯಾಂಟೀನ್‌ ತಾತ್ಕಾಲಿಕ ಸ್ಥಗಿತಕ್ಕೆ ಶಾಸಕ ಸೂಚನೆ । ಭೇಟಿ ನೀಡಿ ಪರಿಶೀಲನೆಕನ್ನಡಪ್ರಭ ವಾರ್ತೆ ಶಿರಸಿ

ನಗರದ ಐದು ರಸ್ತೆ ಸಮೀಪದ ರಾಯಪ್ಪ ಹುಲೇಕಲ್ ಶಾಲಾ ಆವಾರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಇಂದಿರಾ ಕ್ಯಾಂಟೀನ್‌ಗೆ ಭಾನುವಾರ ಬೆಳಗ್ಗೆ ಶಾಸಕ ಭೀಮಣ್ಣ ನಾಯ್ಕ ದಿಢೀರ್‌ ಭೇಟಿ ನೀಡಿ, ಪರಿಶೀಲಿಸಿದರು.

ಅಡುಗೆ ಕೋಣೆ, ಆಹಾರ ತಯಾರಿಕೆ, ಅಡುಗೆ ಸಾಮಗ್ರಿಗಳ ದಾಸ್ತಾನು ಪ್ರಮಾಣ ಎಲ್ಲವನ್ನೂ ಪರಿಶೀಲಿಸಿದರು. ಕ್ಯಾಂಟಿನ್‌ನಲ್ಲಿ ಗ್ರಾಹಕರಿಗೆ ನಿಗದಿತವಾಗಿ ನೀಡಬೇಕಾದ ಉಪಹಾರಗಳನ್ನು ನೀಡುತ್ತಿಲ್ಲ ಎಂಬ ದೂರು ಬಂದಿವೆ. ಹೀಗಾಗಿಯೇ ಪರಿಶೀಲನೆಗೆ ಬಂದಿದ್ದೇನೆ ಎಂದ ಶಾಸಕರು, ಇಡ್ಲಿಯನ್ನು ತಯಾರಿಸದೇ ಎಷ್ಟು ದಿನ ಆಯಿತು ಎಂದು ಕ್ಯಾಂಟೀನ್‌ನಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರು. ಕಳೆದ ವಾರದಿಂದ ತಯಾರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ತಹಸೀಲ್ದಾರ ಪುಟ್ಟರಾಜ ಗೌಡ ಸ್ಥಳಕ್ಕೆ ಆಗಮಿಸಿದರು. ನಗರಸಭೆ ಪರಿಸರ ಅಭಿಯಂತ ಶಿವರಾಜ ಅವರನ್ನು ಸ್ಥಳಕ್ಕೆ ಕರೆಯಿಸಿದ ಶಾಸಕರು, ಸರ್ಕಾರದ ಯೋಜನೆ ಹೀಗಾದರೆ ಹೇಗೆ? ಇದರ ನಿರ್ವಹಿಸುವವರು? ಅಡುಗೆ ಗುಣಮಟ್ಟ, ತಯಾರಿಕೆ, ಸ್ವಚ್ಛತೆಯ ಬಗ್ಗೆ ಪರಿಶೀಲನೆ ಮಾಡುವವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.

ನಾವು ನಿತ್ಯ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಪರಿಸರ ಅಭಿಯಂತರರು ಸಮಜಾಯಿಶಿ ನೀಡುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಇನ್ನಷ್ಟು ಗರಂ ಆದ ಶಾಸಕ ಭೀಮಣ್ಣ, ಹಾಗಾದರೆ ನಿತ್ಯ ಯಾವ್ಯಾವ ಆಹಾರ ಕೊಡಬೇಕು? ಅದನ್ನೆಲ್ಲ ಕೊಡ್ತಾ ಇದ್ದಾರಾ ? ಅಡುಗೆ ಸಿಬ್ಬಂದಿ ಪ್ರಶ್ನಿಸಿದರೆ ಇಡ್ಲಿ ನೀಡದೇ ವಾರ ಆಯ್ತು ಎನ್ನುತ್ತಿದ್ದಾರೆ? ಹೀಗಾದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಅಲ್ಲಿಗೆ ಬಂದ ಗ್ರಾಹಕರು ಬೆಳಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಸಮಯದಲ್ಲೂ ಒಂದೆ ಆಹಾರ ನೀಡಲಾಗುತ್ತಿದೆ ಎಂದು ದೂರಿದರು.

ಇದೇ ವೇಳೆ ಟೆಂಡರ್‌ದಾರರಿಗೂ ಪೋನಾಯಿಸಿದ ಶಾಸಕರು, ಶಿರಸಿ ಹಾಗೂ ಸಿದ್ದಾಪುರ ಎರಡು ಕಡೆ ಇಂದಿರಾ ಕ್ಯಾಂಟೀನ್‌ ಸರಿಯಾಗಿ ನಿರ್ವಹಿಸದೇ ಸಮಸ್ಯೆ ಮಾಡುತ್ತಿದ್ದೀರಿ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಪ್ರಮುಖರಾದ ಮಧುಕರ ಬಿಲ್ಲವ, ಲುಕ್ಕು ನರೋನ್ಹಾ ಮತ್ತಿತರರು ಇದ್ದರು.ಕೆಲ ದಿನ ಕ್ಯಾಂಟೀನ್‌ ಬಂದ್

ಇಂದಿರಾ ಕ್ಯಾಂಟೀನ್‌ನಲ್ಲಿ ನಿಯಮದಂತೆ ಆಹಾರ ನೀಡುವಂತೆ ನೀಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಇದರ ನಿರ್ವಹಣೆ ಯಾರ್‍ಯಾರು ಮಾಡಬೇಕು? ಎಂಬುದರ ಬಗ್ಗೆ ತಹಸೀಲ್ದಾರ ನೇತೃತ್ವದಲ್ಲಿ ಸಭೆ ನಡೆಸಬೇಕು. ಸರಿಯಾದ ವ್ಯವಸ್ಥೆ ಆಗುತ್ತದೆ ಎಂದಾದ ಮೇಲಷ್ಟೇ ಕ್ಯಾಂಟಿನ್ ಪುನಃ ತೆರೆಯಬೇಕು. ಅಲ್ಲಿಯವರೆಗೆ ಬಂದ್ ಮಾಡಿ ಎಂದು ಸೂಚನೆ ನೀಡಿದರು. ನಂತರ ಅಧಿಕಾರಿಗಳು ತಾಂತ್ರಿಕ ಕಾರಣದಿಂದ ಕೆಲ ದಿನ ಕ್ಯಾಂಟೀನ್‌ ಬಂದ್ ಮಾಡಲಾಗಿದೆ ಎಂಬ ನಾಮಫಲಕ ಅಂಟಿಸಿ ಬಂದ್ ಮಾಡಿಸಿದರು.